ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ: ಅಗ್ರ ಸಾಧಕ ಪಟ್ಟಿಯಲ್ಲಿ ಕರ್ನಾಟಕ ಸೇರಿ ನಾಲ್ಕು ದಕ್ಷಿಣ ರಾಜ್ಯಗಳಿಗೆ ಸ್ಥಾನ

Update: 2022-06-30 16:56 GMT
ನಿರ್ಮಲಾ ಸೀತಾರಾಮನ್ (PTI)

ಹೊಸದಿಲ್ಲಿ: ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ 2020ರ ಅನುಷ್ಠಾನದ ಆಧಾರದಲ್ಲಿ ಸಿದ್ಧಪಡಿಸಿರುವ ಅಗ್ರ ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದೆ. ಕರ್ನಾಟಕದೊಂದಿಗೆ ಆಂಧ್ರಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಅಗ್ರ ಸಾಧಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬಿಡುಗಡೆ ಮಾಡಿದ ವರದಿ ಹೇಳಿದೆ. ವಿಶೇಷವೆಂದರೆ, ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು 'ಸಾಧಕ' ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು timesofindia ವರದಿ ಮಾಡಿದೆ. 

ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದು, ವ್ಯಾಪಾರ-ಸ್ನೇಹಿ ವಾತಾವರಣವನ್ನು ಬೆಳೆಸುವುದು, ವ್ಯಾಪಾರದ ಅನುಷ್ಠಾನದಲ್ಲಿ ರಾಜ್ಯಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ವ್ಯವಸ್ಥೆಯ ಮೂಲಕ ಆರೋಗ್ಯಕರ ಸ್ಪರ್ಧೆಯ ಅಂಶವನ್ನು ಪರಿಚಯಿಸಿ, ದೇಶಾದ್ಯಂತ ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸುವುದು ವ್ಯಾಪಾರ ಸುಧಾರಣೆಗಳ ಕ್ರಿಯಾ ಯೋಜನೆ (BRAP) ಯ ಗುರಿಯಾಗಿದೆ.

ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವಿನ ವ್ಯತ್ಯಾಸವು ತೀರಾ ಕಡಿಮೆ ಇದ್ದ ಕಾರಣದಿಂದಾಗಿ, ಅವುಗಳಿಗೆ ರ್‍ಯಾಂಕ್ ನೀಡುವ ಬದಲು, ಅವುಗಳನ್ನು ಬೇರೆ ಬೇರೆ ವರ್ಗಗಳ ಅಡಿ ತರಲಾಗಿದೆ. ಆಸ್ಪೈರ್ಸ್ ವಿಭಾಗವು ಅಸ್ಸಾಂ, ಕೇರಳ ಮತ್ತು ಗೋವಾ ಸೇರಿದಂತೆ ಏಳು ರಾಜ್ಯಗಳನ್ನು ಒಳಗೊಂಡಿದೆ. ಛತ್ತೀಸ್‌ಗಢ, ಜಾರ್ಖಂಡ್, ಕೇರಳ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಈ ವಿಭಾಗದಲ್ಲೇ ಒಳಗೊಂಡಿರುವ ಇತರೆ ರಾಜ್ಯಗಳು.

ಉದಯೋನ್ಮುಖ ವ್ಯಾಪಾರ ಪರಿಸರ ವ್ಯವಸ್ಥೆಗಳ ವಿಭಾಗದಲ್ಲಿ, ದೆಹಲಿ, ಪುದುಚೇರಿ ಮತ್ತು ತ್ರಿಪುರ ಸೇರಿದಂತೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವೆ. ಅಂಡಮಾನ್ ಮತ್ತು ನಿಕೋಬಾರ್, ಬಿಹಾರ, ಚಂಡೀಗಢ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಈ ವಿಭಾಗದಲ್ಲಿ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.

ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಕಾರ್ಯದರ್ಶಿ (ಡಿಪಿಐಐಟಿ) ಅನುರಾಗ್ ಜೈನ್ ಅವರು, ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವಿನ ವ್ಯತ್ಯಾಸವು ತುಂಬಾ ಕಡಿಮೆಯಿದ್ದು, ಅವುಗಳನ್ನು ಶ್ರೇಣೀಕರಿಸುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಅವುಗಳನ್ನು ವಿವಿಧ ವರ್ಗಗಳಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಧಾರಣಾ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಲು 118 ಹೊಸ ಸುಧಾರಣೆಗಳನ್ನು ಸೇರಿಸಲಾಗಿದೆ. ಸುಧಾರಣಾ ಕಾರ್ಯಸೂಚಿಯ ವ್ಯಾಪ್ತಿಯನ್ನು ವಿಸ್ತರಿಸಲು ಟ್ರೇಡ್ ಲೈಸೆನ್ಸ್, ಹೆಲ್ತ್‌ಕೇರ್, ಲೀಗಲ್ ಮೆಟ್ರಾಲಜಿ ಮತ್ತು ಸಿನಿಮಾ ಹಾಲ್‌ಗಳಂತಹ ಒಂಬತ್ತು ಕ್ಷೇತ್ರಗಳಲ್ಲಿ ಹರಡಿರುವ 72 ಕ್ರಿಯಾ ಅಂಶಗಳೊಂದಿಗೆ ವಲಯ ಸುಧಾರಣೆಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News