ವಿಶ್ವದಾದ್ಯಂತ ಸಮಸ್ಯೆ ಸೃಷ್ಟಿಗೆ ನೇಟೊ ಕಾರಣ ರಶ್ಯ, ಚೀನಾ ಪ್ರತಿಕ್ರಿಯೆ

Update: 2022-06-30 17:12 GMT
Photo: Twitter/@NATO

ಮ್ಯಾಡ್ರಿಡ್, ಜೂ.30: ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಗುರುವಾರ ಮುಕ್ತಾಯಗೊಂಡ ನೇಟೊ ಒಕ್ಕೂಟದ ಶೃಂಗಸಭೆಯ ಘೋಷಣೆಯು ನೇಟೊ ಒಕ್ಕೂಟ ಹಾಗೂ ರಶ್ಯ-ಚೀನಾ ನಡುವೆ ತೀವ್ರ ವಾಗ್ಯುದ್ದಕ್ಕೆ ಕಾರಣವಾಗಿದೆ.

ಜಾಗತಿಕ ಶಾಂತಿ, ಸ್ಥಿರತೆಗೆ ರಶ್ಯ ನೇರ ಬೆದರಿಕೆಯಾಗಿದ್ದರೆ ಚೀನಾದಿಂದ ಗಂಭೀರ ಸವಾಲು ಎದುರಾಗಿದೆ ಎಂದು ನೇಟೊ ಘೋಷಿಸಿದೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಶ್ಯ ಮತ್ತು ಚೀನಾ, ವಿಶ್ವದೆಲ್ಲೆಡೆ ಶಾಂತಿ ಕದಡಲು ನೇಟೊ ನೇರ ಕಾರಣವಾಗಿದೆ ಎಂದು ಆರೋಪಿಸಿದೆ. ನೇಟೊ ಒಕ್ಕೂಟ ದೇಶದ ಮೇಲೆ ದುರುದ್ದೇಶಪೂರಿತ ದಾಳಿ ನಡೆಸಿ ದೇಶದ ಪ್ರತಿಷ್ಟೆಗೆ ಮಸಿ ಬಳಿಯುತ್ತಿದೆ ಎಂದು ಚೀನಾ ತಿರುಗೇಟು ನೀಡಿದೆ.

ನೇಟೊ ಶೃಂಗಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ನೇಟೊ ಪ್ರಧಾನ ಕಾರ್ಯದರ್ಶಿ ಸ್ಟಾಲ್ಟನ್‌ಬರ್ಗ್, ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಶೀತಲ ಸಮರದ ನಂತರ ನಮ್ಮ ಸಾಮೂಹಿಕ ರಕ್ಷಣೆಯ ಅತೀ ದೊಡ್ಡ ಕೂಲಂಕುಷ ಪರೀಕ್ಷೆಗೆ ಕಾರಣವಾಗಿದೆ. ರಶ್ಯದ ಆಕ್ರಮಣವು ಯುರೋಪ್‌ನ ಶಾಂತಿಯನ್ನು ಚಿಂದಿಗೊಳಿಸಿದ್ದು ಇದಕ್ಕೆ ಪ್ರತಿಯಾಗಿ ನೇಟೊ ತನ್ನ ಪಡೆಯನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರ್ವ ಯುರೋಪ್‌ನತ್ತ ರವಾನಿಸಬೇಕಾಗಿದೆ. ನಾವು ಹೆಚ್ಚು ಅಪಾಯಕಾರಿ, ಹೆಚ್ಚು ಅನಿರೀಕ್ಷಿತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಮತ್ತು ಯುರೋಪ್‌ನಲ್ಲಿ ಬಿಸಿ ಯುದ್ಧದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದೇವೆ. ಇದೇ ಸಂದರ್ಭ ಈ ಯುದ್ಧ ರಶ್ಯ ಮತ್ತು ನೇಟೊದ ಮಧ್ಯೆ ಪೂರ್ಣಪ್ರಮಾಣದ ಯುದ್ಧವಾಗಿ ಬದಲಾದರೆ ಇನ್ನಷ್ಟು ಹದಗೆಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News