ಅಮೆರಿಕ ಸುಪ್ರೀಂಕೋರ್ಟ್‌ನ ಆದೇಶ ಅಸ್ಥಿರತೆಗೆ ಕಾರಣವಾಗಬಹುದು : ಬೈಡನ್

Update: 2022-06-30 17:33 GMT

ಮ್ಯಾಡ್ರಿಡ್, ಜೂ.30: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸುವ ಸುಪ್ರೀಂಕೋರ್ಟ್ ಆದೇಶದಿಂದ ಅಸ್ಥಿರತೆ ಮೂಡಿ ಅಸಾಮಾಧಾನಕ್ಕೆ ಕಾರಣವಾಗುತ್ತದೆ. ಆದರೂ, ಜಗತ್ತನ್ನು ಮುನ್ನಡೆಸುವ ಅಮೆರಿಕದ ಸ್ಥಾನಮಾನಕ್ಕೆ ಇದರಿಂದ ಧಕ್ಕೆಯಾಗದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

 ಐದು ದಿನಗಳ ವಿದೇಶ ಪ್ರವಾಸದ ಅಂತಿಮ ಚರಣದಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನೇಟೊ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ಧಿಗಾರರ ಜತೆ ಮಾತನಾಡುತ್ತಿದ್ದರು. ಜಗತ್ತನ್ನು ಮುನ್ನಡೆಸಲು ಹಿಂದೆಂದಿಗಿಂತಲೂ ಈಗ ಅಮೆರಿಕ ಉತ್ತಮ ಸ್ಥಾನದಲ್ಲಿದೆ. ಆದರೆ ಅಮೆರಿಕ ಸುಪ್ರೀಂಕೋರ್ಟ್‌ನ ಅತಿರೇಕದ ನಡವಳಿಕೆ ಅಸಮಾಧಾನಕ್ಕೆ ಕಾರಣವಾಗುವುದಲ್ಲದೆ ಖಾಸಗಿತನದ ಹಕ್ಕಿನ ಮೇಲೆಯೂ ಸವಾಲೆಸೆಯುತ್ತಿದೆ ಎಂದರು.

 ನೇಟೊ ಒಕ್ಕೂಟದ ಕಾರ್ಯತಂತ್ರದ ಪರಿಕಲ್ಪನೆಯಲ್ಲಿ ಚೀನಾ ಮತ್ತು ರಶ್ಯದ ವಿರುದ್ಧ ಕಠಿಣ ಪದ ಬಳಸಿರುವ ಶ್ರೇಯ ಅಮೆರಿಕಕ್ಕೆ ಸಲ್ಲಬೇಕಾಗಿದೆ. 12 ವರ್ಷದ ಹಿಂದೆ ಕಾರ್ಯತಂತ್ರದ ಪರಿಕಲ್ಪನೆ ರೂಪಿಸಿದ ಸಂದರ್ಭ ರಶ್ಯವನ್ನು ಸಹಯೋಗಿ ದೇಶ ಎಂದು ವ್ಯಾಖ್ಯಾನಿಸಲಾಗಿತ್ತು ಮತ್ತು ಚೀನಾದ ಬಗ್ಗೆ ಉಲ್ಲೇಖವೇ ಇರಲಿಲ್ಲ. ಆದರೆ ಅಂದಿನಿಂದ ಜಗತ್ತಿನಲ್ಲಿ ಭಾರೀ ಬದಲಾವಣೆಯಾಗಿದೆ. ಈ ಬಾರಿಯ ಶೃಂಗಸಭೆ ನಮ್ಮ ಒಕ್ಕೂಟವನ್ನು ಬಲಪಡಿಸಲು, ಈಗ ಜಗತ್ತಿಗೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ಎದುರಿಸಬೇಕಾದ ಬೆದರಿಕೆಯ ಬಗ್ಗೆ ಗಮನ ಹರಿಸಿದೆ. ಇದೊಂದು ಐತಿಹಾಸಿಕ ನೇಟೊ ಶೃಂಗಸಭೆಯಾಗಿದೆ ಎಂದು ಬೈಡನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News