ಹಾಂಕಾಂಗ್‌ಗೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್

Update: 2022-06-30 17:34 GMT

 ಹಾಂಕಾಂಗ್, ಜೂ.30: ಹಾಂಕಾಂಗ್ ಬ್ರಿಟಿಷರಿಂದ ಚೀನಾಕ್ಕೆ ಹಸ್ತಾಂತರಗೊಂಡ 25ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಗುರುವಾರ ಹಾಂಕಾಂಗ್‌ಗೆ ಆಗಮಿಸಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

 ಜುಲೈ 1ರಂದು ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಹಾಂಕಾಂಗ್‌ನ ನೂತನ ಕಾರ್ಯನಿರ್ವಹಣಾಧಿಕಾರಿ ಜಾನ್ ಲೀ ಅವರ ಪ್ರಮಾಣವಚನ ಕಾರ್ಯಕ್ರಮವೂ ನಿಗದಿಯಾಗಿದೆ. ಸುಮಾರು 2 ವರ್ಷದ ಬಳಿಕ ಕ್ಸಿಜಿಂಪಿಂಗ್ ದೇಶದಿಂದ ಹೊರಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಪತ್ನಿ ಪೆಂಗ್ ಲಿಯುವಾನ್ ಜತೆ ಆಗಮಿಸಿದ ಅವರಿಗೆ ಹಾಂಕಾಂಗ್‌ನ ಹೈಸ್ಪೀಡ್ ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಮಕ್ಕಳು ಹಾಗೂ ಇತರರು ಹಾರ್ದಿಕ ಸ್ವಾಗತ ಕೋರಿದರು ಎಂದು ಮಾಧ್ಯಮ ವರದಿ ಮಾಡಿದೆ.

 ಈ ಸಂದರ್ಭ 2019ರ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ಕ್ಸಿ, ಹಾಂಕಾಂಗ್ ಸವಾಲುಗಳನ್ನು ಉತ್ತರಿಸಿ ಹಲವು ಸಮಸ್ಯೆಗಳ ಸುಳಿಯಿಂದ, ಮೇಲೆದ್ದು ಬಂದಿದೆ. ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆರೀ ಲ್ಯಾಮ್ ಚೆಂಗ್ ಅವರ ದಕ್ಷ ಆಡಳಿತದಿಂದ ನಗರದ ಗೊಂದಲ ಮತ್ತು ಅವ್ಯವಸ್ಥೆ ದೂರವಾಗಿದೆ. ಕೇವಲ ದೇಶಭಕ್ತರು ಮಾತ್ರ ಆಡಳಿತ ನಡೆಸಬಲ್ಲರು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಒಂದು ದೇಶ, ಎರಡು ವ್ಯವಸ್ಥೆ ನೀತಿಗೆ ಬದ್ಧವಾಗಿರುವ ಹಾಂಕಾಂಗ್‌ಗೆ ಉತ್ತಮ ಭವಿಷ್ಯವಿದೆ ಎಂದವರು ಹೇಳಿದರು.

ಕ್ಸಿ ಅವರ ನಾಯಕತ್ವದಲ್ಲಿ ಚೀನಾವು ಹಾಂಕಾಂಗ್ ಅನ್ನು ಮರುರೂಪಿಸಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಿದೆ, ಭಿನ್ನಾಭಿಪ್ರಾಯದ ಧ್ವನಿ ಅಡಗಿಸಲು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಿದೆ, ಶಾಲೆಗಳಲ್ಲಿ ‘ದೇಶಭಕ್ತಿಯ’ ಪಠ್ಯಗಳನ್ನು ಹೆಚ್ಚು ಬಳಸಿದೆ ಮತ್ತು ವಿರೋಧ ಪಕ್ಷದ ನಾಯಕರನ್ನು ನಗರದ ಶಾಸಕಾಂಗದಿಂದ ದೂರ ಇರಿಸಲು ಚುನಾವಣಾ ನಿಯಮವನ್ನು ಪರಿಷ್ಕರಿಸಿದೆ. ಕ್ಸಿ ಆಡಳಿತದಲ್ಲಿ ಹಾಂಕಾಂಗ್‌ನಲ್ಲಿ ಸ್ಥಿರತೆ ಮೂಡಿದೆ ಎಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಹೇಳಿಕೊಂಡಿದೆ. ಆದರೆ ಅಮೆರಿಕ, ಬ್ರಿಟನ್ ಮತ್ತಿತರ ಪ್ರಜಾಪ್ರಭುತ್ವ ದೇಶಗಳ ಹಲವರ ಪ್ರಕಾರ, ಅಂತರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿರುವ ಹಾಂಕಾಂಗ್‌ನ ಪ್ರಜೆಗಳ ಸ್ವಾತಂತ್ರ್ಯವನ್ನು ಚೀನಾ ಕಡೆಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News