ಭಾರತದಲ್ಲಿ ಸಾಮೂಹಿಕ ಹತ್ಯೆಯ ಅಪಾಯ ಸಾಧ್ಯತೆ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ

Update: 2022-07-01 05:30 GMT

ಹೊಸದಿಲ್ಲಿ: ವಿಶ್ವದಲ್ಲೇ ಸಾಮೂಹಿಕ ಹತ್ಯೆಯ ಅಪಾಯ ಸಾಧ್ಯತೆ ಇರುವ ದೇಶಗಳ ಪೈಕಿ ಭಾರತಕ್ಕೆ 'ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್' ಎರಡನೇ ರ‍್ಯಾಂಕ್ ನೀಡಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಮೆರಿಕ ರಾಯಭಾರಿಯಾಗಿರುವ ರಶದ್ ಹುಸೈನ್ ಹೇಳಿದ್ದಾರೆ.‌

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಅಪಾಯಕಾರಿ ಎನಿಸಿದ ಹಲವು ಅಂಶಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಈ ಆತಂಕಗಳ ಬಗ್ಗೆ ಅಮೆರಿಕ ನೇರವಾಗಿ ಭಾರತದ ಜತೆ ಚರ್ಚೆ ನಡೆಸಲಿದೆ ಎಂದು ಸ್ಪಷ್ಟ ಪಡಿಸಿರುವುದಾಗಿ hindustantimes.com ವರದಿ ಮಾಡಿದೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತ ಗುಂಪು ಚರ್ಚೆಯಲ್ಲಿ ಮಾತನಾಡಿದ ಅವರು, ಹಾಲೊಕಾಸ್ಟ್ ಮ್ಯೂಸಿಯಂನ ಆರಂಭಿಕ ಮುನ್ನೆಚ್ಚರಿಕೆ ಯೋಜನೆ, ಸಾಮೂಹಿಕ ಹತ್ಯೆಯ ಅಪಾಯ ಸಾಧ್ಯತೆ ಅತ್ಯಧಿಕವಾಗಿರುವ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ ನೀಡಿದೆ. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನೂ ಉಲ್ಲೇಖಿಸಿದ ಅವರು, "ಸಾಮೂಹಿಕ ಹತ್ಯೆಗೆ ಬಹಿರಂಗ ಕರೆ ನೀಡಿರುವುದನ್ನೂ" ಉದಾಹರಿಸಿದರು.

"ಚರ್ಚ್‍ಗಳ ಮೇಲೆ ದಾಳಿ ನಡೆದಿದ್ದು, ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಹಿಜಾಬ್ ನಿಷೇಧಿಸಲಾಗಿದೆ. ಓರ್ವ ಸಚಿವರಂತೂ ಮುಸ್ಲಿಮರನ್ನು ಗೆದ್ದಲುಗಳು ಎಂದು ಬಹಿರಂಗವಾಗಿ ಅಮಾನವೀಯಗೊಳಿಸುವ ಸ್ಥಿತಿ ಕಂಡುಬಂದಿದೆ" ಎಂದು ಅವರು ಹೇಳಿದರು.

ಯಾವುದೇ ಸಮಾಜ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಜೀವಿಸಬೇಕಾದರೆ, ಎಲ್ಲ ಜನರ ಹಕ್ಕುಗಳು ಸುರಕ್ಷಿತವಾಗಿರಬೇಕು ಎಂದು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಖರ್, ದಲಿತರು ಮತ್ತು ಬುಡಕಟ್ಟು ಜನರನ್ನು ಉದಾಹರಿಸಿದರು.

"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ದೇಶದಂತೆ, ನಮ್ಮ ಮೌಲ್ಯಗಳಿಗೆ ಅನುಗುಣವಾಗಿ ಬಾಳಬೇಕು. ಆಗ ಮಾತ್ರ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಧ್ಯವಾಗುತ್ತದೆ. ಎಲ್ಲ ಜನರ ಸಂಪೂರ್ಣ ಸಿದ್ಧತೆ ಮತ್ತು ಸಮಾನ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News