ಅಮಿತ್ ಶಾ ತಮ್ಮ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಸಿಎಂ ಇರುತ್ತಿದ್ದರು : ಉದ್ಧವ್ ಠಾಕ್ರೆ

Update: 2022-07-01 09:47 GMT
Photo:PTI

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿರ್ಗಮಿಸಿದ ನಂತರ ಮೊದಲ ಬಾರಿ ಮಾತನಾಡಿರುವ ಉದ್ಧವ್ ಠಾಕ್ರೆ, ಶಿವಸೇನೆ ಬಂಡಾಯಗಾರ ಏಕನಾಥ್ ಶಿಂಧೆ ಅವರೊಂದಿಗೆ ಹೊಸ ಸರಕಾರ ರಚಿಸಿರುವ ಬಿಜೆಪಿ ವಿರುದ್ಧ ಶುಕ್ರವಾರ  ವಾಗ್ದಾಳಿ ನಡೆಸಿದರು.

"ಬಿಜೆಪಿ ತಥಾಕಥಿತ ಶಿವಸೈನಿಕನೊಬ್ಬನನ್ನು ಮುಖ್ಯಮಂತ್ರಿ ಮಾಡಿತು. ಅಮಿತ್ ಶಾ ಅವರು ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು’’ ಎಂದು ಏಕನಾಥ ಶಿಂಧೆ ಮುಖ್ಯಮಂತ್ರಿಯಾದ ಮರುದಿನ ಉದ್ಧವ್ ಪ್ರತಿಕ್ರಿಯಿಸಿದರು.

2019 ರಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿಯೊಂದಿಗಿನ ತಮ್ಮ ಪಕ್ಷದ 25 ವರ್ಷಗಳ ಮೈತ್ರಿಯನ್ನು ಏಕೆ ಕೊನೆಗೊಳಿಸಿದೆ ಎಂಬುದನ್ನು ಠಾಕ್ರೆ  ಈ ಹೇಳಿಕೆಯ ಮೂಲಕ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಅಸೆಂಬ್ಲಿ ಚುನಾವಣೆಗೆ ಮುನ್ನ ಅಮಿತ್ ಶಾ ಅವರೊಂದಿಗಿನ ಮಾತುಕತೆಯಲ್ಲಿ ಶಿವಸೇನೆ ಮತ್ತು ಬಿಜೆಪಿ, ಮುಖ್ಯಮಂತ್ರಿಯ ಹುದ್ದೆಯನ್ನು ತಲಾ ಎರಡೂವರೆ ವರ್ಷ  ಹಂಚಿಕೊಳ್ಳುವ ಭರವಸೆ ನೀಡಲಾಯಿತು. ಎರಡು ಪಕ್ಷಗಳು ಐದು ವರ್ಷಗಳ ಅಧಿಕಾರದ ಅವಧಿಯನ್ನು ಹಂಚಿಕೊಳ್ಳುವ ಭರವಸೆಯನ್ನು ಬಿಜೆಪಿ  ವಿಶೇಷವಾಗಿ ಅಮಿತ್ ಶಾ ಅವರು ತಿರಸ್ಕರಿಸಿದ್ದರು. ಈ ಮೂಲಕ ಶಾ ಅವರು ತನ್ನ ಮಾತಿಗೆ ತಪ್ಪಿದ್ದರು ಎಂದು ಠಾಕ್ರೆ ಆರೋಪಿಸಿದರು.

ಬಿಜೆಪಿಯಿಂದ ಬೇರ್ಪಟ್ಟ ನಂತರ ಸರಕಾರವನ್ನು ರಚಿಸಲು ಹಾಗೂ  ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡಲು ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಾದ ಎನ್‌ಸಿಪಿ ಹಾಗೂ  ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು  ಠಾಕ್ರೆ ಒಪ್ಪಿಕೊಂಡಿದ್ದರು.ಶಿವಸೇನೆಯ ಬಹುತೇಕ ಶಾಸಕರು ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು ಸೇರಿದ ನಂತರ ಸಮ್ಮಿಶ್ರ ಸರಕಾರ ಪತನಗೊಂಡಿತು.  ಠಾಕ್ರೆ ಅವರು  ಬುಧವಾರ ರಾಜೀನಾಮೆ ನೀಡಿದ್ದರು.

ಬಿಜೆಪಿಯು ಹೊರಗಿನವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದರೆ, 2019ರಲ್ಲಿ ಇದನ್ನು ಏಕೆ ಮಾಡಲಿಲ್ಲ ಎಂದು ಕೆಲವು ರಾಜಕಾರಣಿಗಳು ಹಾಗೂ ರಾಜಕೀಯ ತಜ್ಞರು  ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News