ತೆಲಂಗಾಣ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಸಯಾಮಿ ಅವಳಿಗಳು; ಮುಂದೆ ಸಿಎ ಆಗುವ ಕನಸು

Update: 2022-07-01 10:07 GMT
Photo: Newindianexpress

ಹೈದರಾಬಾದ್: ಹೈದರಾಬಾದ್‍ನ ಸಯಾಮಿ ಅವಳಿಗಳಾದ ವೀಣಾ ಮತ್ತು ವಾಣಿ ತೆಲಂಗಾಣ ಇಂಟರ್‍ಮೀಡಿಯಟ್ ಪರೀಕ್ಷೆಗಳನ್ನು ಫಸ್ಟ್ ಕ್ಲಾಸ್ ಅಂಕಗಳೊಂದಿಗೆ ತೇರ್ಗಡೆಯಾಗಿ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ಫಲಿತಾಂಶ ಮಂಗಳವಾರ ಹೊರಬಿದ್ದಿದೆ.

ವೀಣಾಗೆ ಒಟ್ಟು 1000 ಅಂಕಗಳಲ್ಲಿ 712 ಅಂಕಗಳು ದೊರಕಿದ್ದರೆ ವಾಣಿಗೆ 707 ಅಂಕಗಳು ದೊರಕಿವೆ. ಅವರು ಸಿಇಸಿ ವಿಷಯ (ವಾಣಿಜ್ಯ, ಅರ್ಥಶಾಸ್ತ್ರ ಮತ್ತು ಸಿವಿಕ್ಸ್) ಆಯ್ದುಕೊಂಡಿದ್ದರು.

ತಮ್ಮ ಫಲಿತಾಂಶ ತಿಳಿದು ತುಂಬಾ ಸಂತೋಷ ಪಟ್ಟಿರುವ ಈ ಸಯಾಮಿ ಅವಳಿಗಳು ಮುಂದೆ ಲೆಕ್ಕಪರಿಶೋಧಕರಾಗುವ ಕನಸನ್ನು ಹೊತ್ತುಕೊಂಡಿದ್ದಾರೆ.  ವೀಣಾಗೆ 10ನೇ ತರಗತಿಯಲ್ಲಿ 9.3 ಜಿಪಿಎ ದೊರಕಿದ್ದರೆ ವಾಣಿಗೆ 9.2 ಜಿಪಿಎ ದೊರಕಿತ್ತು.

ಇಬ್ಬರಿಗೂ ಹೆಚ್ಚುವರಿ ಸಮಯಾವಕಾಶವನ್ನು ಪರೀಕ್ಷೆಯಲ್ಲಿ ನೀಡಲಾಗಿತ್ತಾದರೂ ಅವರು ಅದನ್ನು ನಿರಾಕರಿಸಿದ್ದರಲ್ಲದೆ ಪರೀಕ್ಷೆ ಅವಧಿ ಪೂರ್ಣಗೊಳ್ಳಲು 5 ನಿಮಿಷ ಇರುವಾಗಲೇ ಪರೀಕ್ಷೆ ಬರೆದು ಮುಗಿಸಿದ್ದರು.

ವೀಣಾ ಮತ್ತು ವಾಣಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವುದಕ್ಕೆ ತೆಲಂಗಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅವರನ್ನು ಅಭಿನಂದಿಸಿದ್ದಾರೆ. ಅವರ ಉನ್ನತ ಶಿಕ್ಷಣಕ್ಕೆ ಸರಕಾರ ಎಲ್ಲಾ ರೀತಿಯ ಸಹಾಐ ಮಾಡುವುದಾಗಿಯೂ ಅವರು ಹೇಳಿದ್ದಾರೆ.

ತೆಲಂಗಾಣದ ಮಹಬೂಬನಗರದಲ್ಲಿ 2003ರಲ್ಲಿ ವೀಣಾ ಮತ್ತು ವಾಣಿ ಜನಿಸಿದ್ದರು.  ಈ ಸಯಾಮಿ ಅವಳಿಗಳ ಆರೈಕೆ ಸಾಧ್ಯವಿಲ್ಲವೆಂದು ಅವರ ಹೆತ್ತವರು ಅವರನ್ನು ಸಾಕಲು ನಿರಾಕರಿಸಿದ್ದರು. ನಂತರ 12 ವರ್ಷದವರಿರುವಾಗ ಅವರನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಿ ನಂತರ ರಾಜ್ಯ ಆಶ್ರಯ ತಾಣಕ್ಕೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News