ಸಿಪಿಎಂ ಮುಖ್ಯ ಕಚೇರಿಗೆ ಸ್ಫೋಟಕ ವಸ್ತು ಎಸೆದ ಅಪರಿಚಿತರು: ಕಾಂಗ್ರೆಸ್‌ ವಿರುದ್ಧ ಆರೋಪ

Update: 2022-07-01 11:42 GMT

ತಿರುನಂತಪುರಂ: ಗುರುವಾರ ರಾತ್ರಿ ಕೇರಳದ ತಿರುವನಂತಪುರಂನಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಚೇರಿಯ ಗೋಡೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ವಸ್ತುವನ್ನು ಎಸೆದಿದ್ದಾನೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಕಟ್ಟಡ ಇರುವ ಎಕೆಜಿ ಸೆಂಟರ್ ನಲ್ಲಿ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಸವಾರನೊಬ್ಬ ಕಟ್ಟಡದ ಮೇಲೆ ಸ್ಫೋಟಕ ವಸ್ತು ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಇದು ʼಬಾಂಬ್ ದಾಳಿʼ ಎಂದು ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ದಾಳಿ ನಡೆದಾಗ ಎಕೆಜಿ ಸೆಂಟರ್‌ನಲ್ಲಿದ್ದ ಕೆಲವು ಸಿಪಿಐ(ಎಂ) ಸದಸ್ಯರು ಕಾಂಪೌಂಡ್‌ನ ಹೊರಗೆ ದೊಡ್ಡ ಸ್ಫೋಟದ ಶಬ್ದ ಕೇಳಿದೆ ಎಂದು ಹೇಳಿದ್ದಾರೆ.

ಪೊಲೀಸರು ಜಾಗೃತಗೊಂಡಿದ್ದು, ಬಾಂಬ್ ಸ್ಕ್ವಾಡ್ ಅನ್ನು ಸ್ಥಳ ಪರಿಶೀಲನೆಗೆ ನಿಯೋಜಿಸಲಾಗಿದೆ. ತನಿಖೆ ಆರಂಭಿಸಲಾಗಿದೆ ಎಂದು ತಿರುವನಂತಪುರಂ ಪೊಲೀಸ್ ಆಯುಕ್ತ ಜಿ ಸ್ಪರ್ಜನ್ ಕುಮಾರ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಹಿರಿಯ ಸಿಪಿಐ(ಎಂ) ನಾಯಕ ಮತ್ತು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ ಸಂಚಾಲಕ ಇಪಿ ಜಯರಾಜನ್ ದಾಳಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದಾರೆ. ಆದರೂ ಪಕ್ಷದ ಕಾರ್ಯಕರ್ತರು ಪ್ರಕರಣಕ್ಕೆ ಸಂಬಂಧಿಸಿ ಶಾಂತವಾಗಿರುವಂತೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News