ಪ್ರಯಾಗರಾಜ್‍ನಲ್ಲಿ ಜಾವೇದ್ ಮುಹಮ್ಮದ್ ಮನೆ ನೆಲಸಮ ಪ್ರಕರಣ: ದೂರುದಾರರು ಯಾರೆಂದು ಸ್ಥಳೀಯರಿಗೆ ತಿಳಿದಿಲ್ಲ !

Update: 2022-07-01 13:01 GMT

 ಹೊಸದಿಲ್ಲಿ : ಪ್ರವಾದಿ ನಿಂದನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂಬ ಕಾರಣಕ್ಕೆ ಹೋರಾಟಗಾರ ಜಾವೇದ್ ಮೊಹಮ್ಮದ್ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ನೆಲಸಮಗೊಳಿಸಲು ಮೂರು ಜನರ ದೂರು ಕಾರಣ ಎಂದು ಹೇಳಲಾಗಿತ್ತು ಹಾಗೂ ಈ ಮೂವರು ಆ ಮೊಹಲ್ಲಾದ ಗೌರವಾನ್ವಿತ ನಾಗರಿಕರು ಎಂದು ಹೇಳಲಾಗಿದ್ದರೂ ಅವರ್ಯಾರೆಂದು ಇನ್ನೂ ತಿಳಿದು ಬಂದಿಲ್ಲ.

ಆಂಗ್ಲ ದಿನಪತ್ರಿಕೆಯೊಂದು ಪ್ರಯಾಗರಾಜದ ಕರೇಲಿ ಪ್ರದೇಶದ ಜೆ ಕೆ ಆಶಿಯಾನ ಕಾಲನಿಯ ಸುಮಾರು 30 ನಿವಾಸಿಗಳಲ್ಲಿ ದೂರುದಾರರಾದ ಸರಫ್ರಾಜ್, ನೂರ್ ಆಲಂ ಮತ್ತು ಮೊಹಮ್ಮದ್ ಆಝಾಮ್ ಅವರ ಬಗ್ಗೆ ಕೇಳಿದರೂ ಈ ಮಾಹಿತಿ ದೊರಕಿಲ್ಲ. 15 ಮಂದಿ ಯಾವುದೇ ಪ್ರತಿಕ್ರಿಯೆ ನೀಡದೆ ತಾವು ಸರಕಾರದ ಕ್ರಮದ ಬಗ್ಗೆ ಭಯ ಹೊಂದಿದ್ದೇವೆ ಎಂದರೆ ಉಳಿದವರು ದೂರುದಾರರು ಯಾರು ಹಾಗೂ ಅವರ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ ಎಂದು ವರದಿ ಹೇಳಿದೆ.

ಜೂನ್ 12 ರಂದು ಮೊಹಮ್ಮದ್ ಅವರ ಮನೆ ನೆಲಸಮಗೊಳಿಸಲಾಗಿತ್ತು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪಕರಾಗಿರುವ ಮೊಹಮ್ಮದ್ ಅವರು ಪ್ರತಿಭಟನೆಗಳ ರೂವಾರಿ ಎಂದು ಪೊಲಿಸರು ಆರೋಪಿಸಿದ್ದರು.

ಈ ಕಾರ್ಯಾಚರಣೆ ಕುರಿತಂತೆ ಸುಪ್ರೀಂ ಕೋರ್ಟಿಗೆ ತಾನು ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ಉತ್ತರ ಪ್ರದೇಶ ಸರಕಾರ ವಿವರಣೆ ನೀಡಿ ಕಾರ್ಯಾಚರಣೆಗೂ ಪ್ರತಿಭಟನೆಗಳಿಗೂ ಸಂಬಂಧವಿಲ್ಲ ಕಾರ್ಯಾಚರಣೆ ಕಾನೂನಿಗೆ ಅನುಸಾರ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಸರಫ್ರಾಜ್, ನೂರ್ ಆಲಂ ಮತ್ತು ಮೊಹಮ್ಮದ್ ಆಝಂ ಅವರ ದೂರುಗಳನ್ನೂ ಅದರೊಂದಿಗೆ ಲಗತ್ತಿಸಲಾಗಿತ್ತು.  ಮನೆಯಲ್ಲಿ ಅಕ್ರಮ ನಿರ್ಮಾಣವಿತ್ತು ಹಾಗೂ ಕಟ್ಟಡದಲ್ಲಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಚೇರಿಗೆ ಸಮಾಜ ವಿರೋಧಿಗಳು ಭೇಟಿ ನೀಡುತ್ತಿದ್ದರು ಎಂದು ದೂರಲಾಗಿತ್ತು. ದೂರಿನಲ್ಲಿ ದೂರುದಾರರ ವಿಳಾಸ ಹಾಗೂ ಸಂಪರ್ಕ ಮಾಹಿತಿಯಿರಲಿಲ್ಲ ಬದಲು ಅವರನ್ನು ಮೊಹಲ್ಲಾದ ಗೌರವಾನ್ವಿತ ಜನರೆಂದು ಬಣ್ಣಿಸಲಾಗಿದೆ.

"ಮೊಹಮ್ಮದ್ ಅವರ ಎರಡಂತಸ್ತಿನ ಕಟ್ಟಡವನ್ನು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರದ ಅನುಮೋದಿತ ನಕ್ಷೆಯಿಲ್ಲದೆ ನಿರ್ಮಿಸಲಾಗಿದೆ ಹಾಗೂ ಇಲ್ಲಿನ ವೆಲ್ಫೇರ್ ಪಾರ್ಟಿ ಕಚೇರಿಗೆ ಬರುವ ಜನರು ಹಗಲು ರಾತ್ರಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಾರೆ ಹಾಗೂ ಕಚೇರಿಗೆ ಕೆಲ ಸಮಾಜವಿರೋಧಿಗಳೂ ಭೇಟಿ ನೀಡಿದ್ದಾರೆ" ಎಂದು ದೂರಿನಲ್ಲಿ ಹೇಳಲಾಗಿತ್ತು.

ಆದರೆ ಸ್ಥಳೀಯರು ಈ ಆರೋಪ ನಿರಾಕರಿಸಿದ್ದಾರೆ. ದೂರುದಾರರೆಂದು ತಿಳಿಸಲಾದ ಹೆಸರಿನ ಯಾವುದೇ ವ್ಯಕ್ತಿಗಳು ಇಲ್ಲಿಲ್ಲ ಎಂದು ಮೊಹಮ್ಮದ್ ಮನೆ ಅಸುಪಾಸಿನ ಜನರು ಹೇಳುತ್ತಾರೆ.

ಮೇ 6ರಂದು ದೂರು ಬಂದಿತ್ತು ಹಾಗೂ ಆರು ದಿನಗಳ ನಂತರ ಕುಟುಂಬಕ್ಕೆ ನೋಟಿಸ್ ಜಾರಿಯಾಗಿತ್ತು ಎಂದು ಪ್ರಾಧಿಕಾರ ಹೇಳಿದೆ. ನಂತರ ಮೇ 19 ಹಾಗೂ 25ರಂದೂ ನೋಟಿಸ್ ಜಾರಿಗೊಳಿಸಲಾಗಿತ್ತು ಎಂದು ಅಫಿಡವಿಟ್‍ನಲ್ಲಿ ಹೇಳಲಾಗಿದೆ ಹಾಗೂ ಕುಟುಂಬ ನೋಟಿಸ್ ಸ್ವೀಕರಿಸಲು ನಿರಾಕರಿಸಿತ್ತು ಎಂದು ಆರೋಪಿಸಿದೆ. ಆದರೆ ತಮಗೆ ನೋಟಿಸ್ ನೀಡಲು ಯಾರೂ ಬಂದಿಲ್ಲ ಎಂದು ಮೊಹಮ್ಮದ್ ಕುಟುಂಬ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News