ಭಟ್ಕಳ ಪುರಸಭೆ ಕಟ್ಟಡದ 500ಮೀ. ವ್ಯಾಪ್ತಿಯಲ್ಲಿ ಸೆ.144 ಜಾರಿ: ತಹಶೀಲ್ದಾರ್ ಸುಮಂತ್

Update: 2022-07-01 15:05 GMT

ಭಟ್ಕಳ: ಉ.ಕ. ಜಿಲ್ಲಾಧಿಕಾರಿ ಆದೇಶದಂತೆ ಭಟ್ಕಳ ಪುರಸಭಾ ಕಟ್ಟಡಕ್ಕೆ ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದು ಭಾಷೆಯಲ್ಲಿರುವ ನಾಮಫಲಕ ತೆರವುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಶಾಂತಿಭಂಗ ಉಂಟಾಗುವ ಸಂಭವ ಇರುವುದರಿಂದ ಜು.1ರ ಮಧ್ಯಾಹ್ನ 3ಗಂಟೆಯಿಂದ ಜು.2 ಮಧ್ಯರಾತ್ರಿ ವರೆಗೆ ಭಟ್ಕಳ ಪುರಸಭಾ ಕಟ್ಟಡದ 500ಮೀ. ವ್ಯಾಪ್ತಿಯಲ್ಲಿ ಸೆ.144 ಜಾರಿಗೊಳಿಸಿ ತಹಶೀಲ್ದಾರ್ ಸುಮಂತ್ ಬಿ.ಇ. ಆದೇಶಿಸಿದ್ದಾರೆ.

ಈ ಕುರಿತಂತೆ ಶುಕ್ರವಾರ ಪತ್ರಿಕಾ ಪ್ರಕಟಣೆಯೊಂದು ಜಾರಿಗೊಳಿಸಿರುವ ಅವರು, ಮೇಲೆ ಪ್ರಸ್ತಾಪಿಸಿದ ಘಟನೆಯ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಯಾಗಿರುವ ಡಾ.ಸುಮಂತ್ ಬಿ.ಇ., ಭಟ್ಕಳದಲ್ಲಿ ಮುಂಜಾಗೃತ ಕ್ರಮವಾಗಿ ಪುರಸಭೆ ಕಟ್ಟಡದ ಸುತ್ತಮುತ್ತಲ 500ಮೀ. ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದಂ ಪ್ರಕ್ರಿಯಾ ಸಂಹಿತೆ 1973 ಕಲಂ.144 ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ದಿ. 1-07-2022 ರಂದು ಮಧ್ಯಾಹ್ನ 3 ಗಂಟೆಯಿಂದ 2-07-2022 ರ ಮಧ್ಯರಾತ್ರಿವರೆಗೆ ನಿಷೆದಾಜ್ಞೆಯನ್ನು ಜಾರಿಗೊಳಿಸಿದ್ದು ಸದ್ರಿ ಆದೇಶವನ್ನು ಉಲ್ಲಂಘಿಸದಂತೆ ಪೊಲೀಸ್ ನಿರೀಕ್ಷಕರು ಭಟ್ಕಳ ಶಹರ ಕ್ರಮಕೈಗೊಳ್ಳುತ್ತಾರೆ ಎಂದು ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ/ಗುಂಪುಗಳು ಆಯುಧ, ದೊಣ್ಣೆ, ಕತ್ತಿ, ಈಟಿ, ಬಂದೂಕುಗಳು, ಚಾಕು, ಕೋಲು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯುನ್ನಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ಹಾಗೂ ಅದನ್ನು ಬಳಸುವುದನ್ನು ನಿಷೇಧಿಸಿದೆ. ಅಲ್ಲದೆ ನಿಷೇಧಾಜ್ಞೆ ವಿಧಿಸಿದ 500 ಮೀ ವ್ಯಾಪ್ತಿಯಲ್ಲಿ 5 ಜನಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದ್ದು, ಈ ಪ್ರದೇಶದಲ್ಲಿ ಬಹಿರಂಗ ಸಭೆ ಸಮಾರಂಭ, ಮೆರವಣಿಗೆ, ಪ್ರತಿಭಟನೆ ಮಾಡುವುದನ್ನು ನಿಷೇಧಿಸಿದ್ದು ಈ ಆದೇಶವು ವಾರದ ಸಂತೆ, ಮದುವೆ ಮತ್ತು ಶವಸಂಸ್ಕಾರ ಮೆರವಣೆಗೆಗೆ ಹಾಗೂ ಇನ್ನಿತರ ಸರಕಾರಿ ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಪಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News