ಗುವಾಹಟಿಯಲ್ಲಿದ್ದ ಬಂಡುಕೋರ ಶಾಸಕರೊಂದಿಗೆ ಸೇರಲು ನನಗೂ ಆಮಿಷ ಒಡ್ಡಲಾಗಿತ್ತು: ಸಂಜಯ್ ರಾವುತ್

Update: 2022-07-02 17:20 GMT

ಹೊಸದಿಲ್ಲಿ, ಜು. 2:  ಗುವಾಹಟಿಗೆ ತೆರಳುವಂತೆ ಹಾಗೂ ಏಕನಾಥ ಶಿಂದೆ ಮತ್ತು ಇತರ ಬಂಡಾಯ ಶಾಸಕರೊಂದಿಗೆ ಸೇರುವಂತೆ ತನಗೆ ಆಮಿಷ ಒಡ್ಡಲಾಗಿತ್ತು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಶನಿವಾರ ಹೇಳಿದ್ದಾರೆ. 

ಆದರೆ, ತಾನು ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆಯನ್ನು ಅನುಸರಿಸುತ್ತಿರುವುದರಿಂದ ಈ ಆಮಿಷವನ್ನು ತಿರಸ್ಕರಿಸಿದೆ ಎಂದು ಅವರು ತಿಳಿಸಿದ್ದಾರೆ.  
ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘‘ಗುವಾಹಟಿಯಿಂದಲೂ ನನಗೆ ಆಮಿಷ ಒಡ್ಡಲಾಗಿತ್ತು. ಆದರೆ ನಾನು ಬಾಳಾ ಸಾಹೇಬ್ ಠಾಕ್ರೆ ಅವರನ್ನು ಅನುಸರಿಸುತ್ತೇನೆ. ಆದುದರಿಂದ ಅಲ್ಲಿಗೆ ಹೋಗಲಿಲ್ಲ. ಸತ್ಯ ನಮ್ಮ ಕಡೆ ಇರುವಾಗ ಯಾಕೆ ಹೆದರಬೇಕು?’’ ಎಂದು ಅವರು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಹೊಂದುವುದಿಲ್ಲ ಎಂದು ಅವರು ಹೇಳಿದರು. 

‘‘ಕೇಂದ್ರದಿಂದ ಫಡ್ನವಿಸ್‌ಗೆ ಮುಖ್ಯಮಂತ್ರಿ ಸ್ಥಾನ ದೊರೆಯಲಾರದು. ಉಪ ಮುಖ್ಯಮಂತ್ರಿ ಎಂಬ ಶಬ್ದ ಅವರಿಗೆ ಹೊಂದಿಕೆಯಾಗುವುದಿಲ್ಲ. ಇದು ಅವರ ಆಂತರಿಕ ವಿಚಾರ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ’’ ಎಂದು ಅವರು ಹೇಳಿದರು.  
ಬಿಜೆಪಿ ಮಹಾರಾಷ್ಟ್ರ ಹಾಗೂ ಮುಂಬೈಯಲ್ಲಿ ಶಿವಸೇನೆಯನ್ನು ನಾಶಗೊಳಿಸಲು ಬಯಸಿದೆ. ಆದರೆ, ಅದು ನಡೆಯದು ಎಂದು ಅವರು ತಿಳಿಸಿದರು.  

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಸ್ವೀಕರಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಂಜಯ್ ರಾವುತ್, ಜಾರಿ ನಿರ್ದೇಶನಾಲಯದ ಸಮನ್ಸ್‌ನಂತೆ ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News