×
Ad

ವಿಮಾನ ಯಾನ ಸಿಬ್ಬಂದಿ ವರ್ತನೆ ವಿರುದ್ಧ ದೂರು

Update: 2022-07-02 23:52 IST

ಮಂಗಳೂರು, ಜು. 2:  ಕುವೈತ್‌ನಲ್ಲಿರುವ ಏರ್‌ಇಂಡಿಯಾ ಕೌಂಟರ್ ಮ್ಯಾನೇಜರ್ ಉದ್ಧಟತನದ ವರ್ತನೆ ತೋರಿರುವುದಾಗಿ ಕುವೈತ್‌ನ ಅನಿವಾಸಿ ಭಾರತೀಯ ಇಂಜಿನಿಯರ್ ಮಂಜೇಶ್ವರ ಮೋಹನ್‌ ದಾಸ್ ಕಾಮತ್ ಅವರು ಟ್ವೀಟ್ ಮಾಡಿದ್ದಾರೆ.

ಮೋಹನ್‌ ದಾಸ್ ಕಾಮತ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಗ್ಗೆ 10.50 ಕ್ಕೆ ಮಂಗಳೂರಿಗೆ ತೆರಳುವ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಪ್ರಯಾಣದ ದಿನ ಒತ್ತಡ ತಪ್ಪಿಸಲು ಕಾಮತ್ ಅವರ ಕುಟುಂಬದ ಸದಸ್ಯರು ಪ್ರಯಾಣದ 24 ಗಂಟೆ ಮುಂಚಿತವಾಗಿಯೇ ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ್ದರು.

ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ ಪ್ರಯಾಣಿಕರು ಪ್ರಯಾಣದ ಒಂದೂವರೆ ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮ ಲಗೇಜ್‌ಗಳನ್ನು ನಿದಿಪಡಿಸಿದ ಸ್ಥಳದಲ್ಲಿ ತಲುಪಿಸಿ ಬೋರ್ಡಿಂಗ್ ಪಾಸ್ ತೋರಿಸುವುದು ಕ್ರಮ. ಅಂತಾರಾಷ್ಟ್ರೀಯ ಪ್ರಯಾಣ ಸಂದರ್ಭ ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ ಪ್ರಯಾಣಿಕರು ಈ ಚೆಕ್ಕಿಂಗ್ ಪೂರ್ಣಗೊಳಿಸದ ಪ್ರಯಾಣಿಕರ ಜೊತೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆದರೆ ಶುಕ್ರವಾರ ವೆಬ್ ಚೆಕ್ಕಿಂಗ್ ಪೂರ್ಣಗೊಳಿಸಿದ ನನ್ನ ಪತ್ನಿ ಮತ್ತು ಮಕ್ಕಳನ್ನು ಇತರ ಪ್ರಯಾಣಿಕರ ಜೊತೆಯಲ್ಲೇ ನಿಲ್ಲಿಸಲಾಯಿತು. ಈ ಬಗ್ಗೆ ಏರ್‌ಇಂಡಿಯಾ ಕೌಂಟರ್ ಮ್ಯಾನೇಜರ್‌ನನ್ನು ವಿಚಾರಿಸಿದರೆ ಉದ್ಧಟತನದ ಉತ್ತರ ದೊರೆಯಿತು ಎಂದು ಮೋಹನ್‌ದಾಸ್ ಕಾಮತ್ ಟ್ವೀಟ್ ಮಾಡಿದ್ದಾರೆ.

ಲಗೇಜ್ ಇಲ್ಲದವರಿಗೆ ಮಾತ್ರ ವೆಬ್‌ಚೆಕ್ಕಿಂಗ್ ಸೌಲಭ್ಯ ದೊರೆಯುತ್ತದೆ ಎಂದು ಏರ್‌ಇಂಡಿಯಾ ಕೌಂಟರ್ ಮ್ಯಾನೇಜರ್ ಹೇಳಿದ್ದಾರೆ. ಈ ಮಾತಿಗೆ ಅರ್ಥವೇ ಇಲ್ಲ. ಕುವೈತ್‌ನಿಂದ ಯಾವುದೇ ಲಗೇಜ್ ಇಲ್ಲದೆ ತಾಯ್ನಡಿಗೆ ಪ್ರಯಾಣಿಸುತ್ತಾರೆಯೇ ? ಎಂದು ಮೋಹನ್‌ ದಾಸ್ ಕಾಮತ್ ಪ್ರಶ್ನಿಸಿದ್ದಾರೆ.

ಕಾಮತ್ ಅವರ ಟ್ವೀಟ್‌ಗೆ ಉತ್ತರಿಸಿ ಮರುಟ್ವೀಟ್ ಮಾಡಿರುವ ಏರ್ ಇಂಡಿಯಾ ಸಂಸ್ಥೆಯು ಘಟನೆಗೆ ಕ್ಷಮೆ ಯಾಚಿಸಿ, ಪ್ರಕರಣದ ತನಿಖೆ ನಡೆಸಲು ಸಂಬಂಧಪಟ್ಟ ವಿಭಾಗಕ್ಕೆ ದೂರನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News