ಭಯೋತ್ಪಾದಕ ಅಜ್ಮಲ್‌ ಕಸಬ್‌ಗೂ ಇಂತಹಾ ಭದ್ರತೆ ಇರಲಿಲ್ಲ: ಬಂಡಾಯ ಶಾಸಕರ ಕುರಿತು ಆದಿತ್ಯ ಠಾಕ್ರೆ ಕಿಡಿ

Update: 2022-07-03 10:36 GMT

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶಿಂಧೆ ಬಣದ ಬಂಡಾಯ ಶಾಸಕರ ಬಿಗಿ ಭದ್ರತೆಯನ್ನು ರವಿವಾರ ಪ್ರಶ್ನಿಸಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಭಯೋತ್ಪಾದಕ ಅಜ್ಮಲ್ ಕಸಬ್‌ಗೂ ಅಂತಹ ಭದ್ರತೆ ಇರಲಿಲ್ಲ ಎಂದು ಅವರು ಟೀಕಿಸಿದ್ದಾರೆ.

"ಮುಂಬೈನಲ್ಲಿ ನಾವು ಈ ಹಿಂದೆ ಅಂತಹ ಭದ್ರತೆಯನ್ನು ನೋಡಿರಲಿಲ್ಲ. ನಿಮಗೇಕೆ ಭಯ? ಯಾರಾದರೂ ಓಡಿಹೋಗುತ್ತಾರೆಯೇ? ಇಷ್ಟು ಭಯ ಏಕೆ” ಎಂದು ಶಿಂಧೆ ಬಣದ ಶಾಸಕರು ವಿಧಾನ ಭವನ ಪ್ರವೇಶಿಸಿದ ಬಳಿಕ ಠಾಕ್ರೆ ಪ್ರಶ್ನಿಸಿದ್ದಾರೆ.

ರವಿವಾರ ನಡೆಯುವ ಸ್ಪೀಕರ್ ಚುನಾವಣೆ ಮತ್ತು ಸೋಮವಾರದ ವಿಶ್ವಾಸಮತ ಪರೀಕ್ಷೆಗಾಗಿ ಬಂಡಾಯ ಶಾಸಕರು ಶನಿವಾರ ಸಂಜೆ ಗೋವಾದಿಂದ ಮುಂಬೈಗೆ ಆಗಮಿಸಿದ್ದಾರೆ. ಅವರನ್ನು ದಕ್ಷಿಣ ಮುಂಬೈನ ವಿಧಾನ ಭವನದ ಸಮೀಪದ ಐಷಾರಾಮಿ ಹೋಟೆಲ್‌ನಲ್ಲಿ ಇರಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ಶಾಸಕರು ವಿಧಾನಸಭೆಗೆ ಆಗಮಿಸಿದ್ದರು.

ಶಿಂಧೆ ಅವರನ್ನು ಬೆಂಬಲಿಸುವ ಬಂಡಾಯ ಶಿವಸೇನೆ ಶಾಸಕರು ಶನಿವಾರ ಸಂಜೆ ಗೋವಾದಿಂದ ಮುಂಬೈಗೆ ವಾಪಸಾಗಿದ್ದು, ದಕ್ಷಿಣ ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ವಿಧಾನ ಭವನ ಪ್ರವೇಶಿಸಲು ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News