×
Ad

ಭಟ್ಕಳ; ಡೊಂಗರಪಲ್ಲಿಯಲ್ಲಿ ಬಾಲಕ ಸೇರಿ ಮೂವರ ಮೇಲೆ ಬೀದಿ ನಾಯಿ ದಾಳಿ

Update: 2022-07-03 22:27 IST
ಸಾಂದರ್ಭಿಕ ಚಿತ್ರ

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಡೋಂಗರಪಳ್ಳಿಯಲ್ಲಿ ಬಾಲಕ ಸೇರಿ ಮೂವರ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ರವಿವಾರ ಸಂಜೆಯ ಸುಮಾರಿಗೆ ನಡೆದಿದೆ.

ಬಾಲಕ ಮನೆಯ ಹೊರಗಿನ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಯಿ ದಾಳಿ ಮಾಡಿದೆ. ಕೂಡಲೇ ಮನೆಯವರು ಹೊರಗೆ ಬಂದು ನಾಯಿಯಿಂದ ಬಾಲಕನನ್ನು ರಕ್ಷಿಸಿದ್ದಾರೆ.

ತಕ್ಷಣ ಬಾಲಕನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ಚುಚ್ಚುಮದ್ದು ನೀಡಿ ಕಂದಾಪುರಕ್ಕೆ ಕಳುಹಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ತಕಿಯಾ ಸ್ಟ್ರೀಟ್‌ನ ಇಮ್ರಾನ್ ಖುಶಾಲ್ ತನ್ನ ಕುಟುಂಬದೊಂದಿಗೆ ನವಾಯತ್ ಕಾಲನಿಯ ಮದುವೆ ಮಂಟಪದಲ್ಲಿ ರಾತ್ರಿ ಸುಮಾರು 8 ಗಂಟೆಗೆ ಆಟೋರಿಕ್ಷಾದಿಂದ ಇಳಿದ ವೇಳೆ ನಾಯಿಯೊಂದು ಆಕೆಯ ನಾಲ್ಕು ವರ್ಷದ ಪುತ್ರ ಬಿಲಾಲ್ ಮೇಲೆ ದಾಳಿ ಮಾಡಿದೆ. ಬಾಲಕನ ಮುಖಕ್ಕೆ ಗಾಯಗಳಾಗಿವೆ.

ನಾಯಿಯ ಹಿಡಿತದಿಂದ ಮಗುವನ್ನು ರಕ್ಷಿಸುವ ಯತ್ನದಲ್ಲಿ ಯುವಕ ಅಸೀಮ್‌ನ ಮೇಲೂ ನಾಯಿ ದಾಳಿ ಮಾಡಿದ್ದು, ಅಸಿಮ್‌ಗೂ ನಾಯಿ ಕಚ್ಚಿದೆ ಎಂದು ವರದಿಯಾಗಿದೆ. ಇಬ್ಬರಿಗೂ ಹತ್ತಿರದ ಆಸ್ಪತ್ರೆಯಿಂದ ಅಗತ್ಯ ಚುಚ್ಚು ಮದ್ದು ನೀಡಲಾಗಿದೆ.

ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು ಬೆಳಗ್ಗೆ ಶಾಲೆಗೆ ಹೋಗಲು ಮನೆಯ ಮುಂದೆ ನಿಂತುಕೊಂಡ ವಿದ್ಯಾರ್ಥಿಗಳ ಮೇಲೆ ಎರಗಿ ಬೀಳುತ್ತಿವೆ. ಈ ಕುರಿತಂತೆ ಹಲವು ಸಂಘಟನೆಗಳು ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News