ಇಸ್ರೇಲ್ ಜೈಲಿನಲ್ಲಿದ್ದ ಪೆಲೆಸ್ತೀನ್ ಮಹಿಳಾ ಖೈದಿ ಮೃತ್ಯು

Update: 2022-07-03 17:41 GMT

ಜೆರುಸಲೇಂ, ಜು.3: ಇಸ್ರೇಲ್‌ನ ಜೈಲಿನಲ್ಲಿ 6 ತಿಂಗಳಿಂದ ಬಂಧನಲ್ಲಿದ್ದ ಪೆಲೆಸ್ತೀನ್‌ನ 68 ವರ್ಷದ ಮಹಿಳೆ ಮೃತಪಟ್ಟಿರುವುದಾಗಿ ಪೆಲೆಸ್ತೀನ್‌ನ ವಫಾ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಆಕ್ರಮಿತ ಪಶ್ಚಿಮ ಬ್ಯಾಂಕ್‌ನಲ್ಲಿನ ಹೆಬ್ರಾನ್ ಬಳಿಯ ಮಿಲಿಟರಿ ಚೆಕ್‌ಪೋಸ್ಟ್‌ನಲ್ಲಿ 2021ರ  ಡಿಸೆಂಬರ್‌ನಲ್ಲಿ ಸಾದಿಯಾ ಫರಾಜಲ್ಲಾ ಎಂಬ ಮಹಿಳೆಯನ್ನು, ಭದ್ರತಾ ಸಿಬಂದಿಗಳಿಗೆ ಚೂರಿಯಿಂದ ಇರಿಯಲು ಪ್ರಯತ್ನಿಸಿದ ಆರೋಪದಲ್ಲಿ  ಇಸ್ರೇಲ್ ಅಧಿಕಾರಿಗಳು ಬಂಧಿಸಿದ್ದರು.  ಬಳಿಕ ಅವರನ್ನು ಡಮಾನ್ ಜೈಲಿನಲ್ಲಿ ಇರಿಸಲಾಗಿದ್ದು ಅವರು ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. 

ಇಸ್ರೇಲ್ ಅಧಿಕಾರಿಗಳು ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸದ ಕಾರಣ ಸಾದಿಯಾ ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.  ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಕ್ರಮಿತ ಪಶ್ಚಿಮದಂಡೆಯ ಆಡಳಿತ ನಿರ್ವಹಿಸುವ  ಪೆಲೆಸ್ತೀನ್ ಅಥಾರಿಟಿ(ಪಿಎ) ಆಗ್ರಹಿಸಿದೆ. 

ಸಾದಿಯಾ ಅವರ ಮರಣದ ಹಿಂದಿನ ಕಾರಣ ನಿಗೂಢವಾಗಿದೆ. ಜೂನ್ 28ರಂದು ಅವರು ಗಾಲಿಕುರ್ಚಿಯ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು ಎಂದು ಇಸ್ರೇಲ್‌ನಲ್ಲಿ ಬಂಧಿಗಳಾಗಿರುವ ಪೆಲೆಸ್ತೀನೀಯರ ಪರ ಕಾರ್ಯನಿರ್ವಹಿಸುವ ಪೆಲೆಸ್ತೀನಿಯನ್ ಪ್ರಿಸನರ್ಸ್ ಕ್ಲಬ್ ಹೇಳಿದೆ. ಸಾದಿಯಾ ಮರಣಕ್ಕೆ  ಇಸ್ರೇಲ್ ಅಧಿಕಾರಿಗಳು ಹೊಣೆ ಎಂದು ಪೆಲೆಸ್ತೀನ್‌ನ ಪ್ರಧಾನಿ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News