ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

Update: 2022-07-03 17:42 GMT

ಕಾರ್ಕಳ : ತುರ್ತು ಪರಿಸ್ಥಿತಿಯನ್ನು ಇಂದು ಬಿಜೆಪಿ ಕಟುವಾಗಿ ಟೀಕಿಸುವಲ್ಲಿ ಮಗ್ನವಾಗಿದೆ. ಆದರೆ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಭೂಮಸೂದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ತುರ್ತು ಪರಿಸ್ಥಿತಿಯೇ ಕಾರಣವಾಗಿತ್ತು ಎಂದು ಹಿರಿಯ ನ್ಯಾಯವಾದಿ, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶೇಖರ್‌ ಮಡಿವಾಳ್‌ ಅಭಿಪ್ರಾಯಪಟ್ಟರು.

ಅವರು ರವಿವಾರ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುಣ್ಯಸ್ಮರಣೆ ಅಂಗವಾಗಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ತುರ್ತು ಪರಿಸ್ಥಿತಿಯಿಂದಲೂ ಅನೇಕ ತೊಂದರೆಗಳಾಗಿರಬಹುದು. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾರಣ ಗೇಣಿದಾರರು ಭೂಮಾಲಿಕರಿಗೆ ಹೆದರದೇ ಡಿಕ್ಲರೇಷನ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಅನೇಕರನ್ನು ಜೈಲಿಗಟ್ಟಲಾಗಿದ್ದು, ಇದರಿಂದ ಭೂಮಾಲಕರು ಬೆದರಿದ್ದರು. ಉಳುವವನೇ ಭೂಮಿಯ ಒಡೆಯ ಕಾನೂನಿನಲ್ಲಿ ಜಮೀನು ಪಡೆದವರ ಮಕ್ಕಳೇ ಇಂದು ಕಾಂಗ್ರೆಸ್‌ಗೆ ಬೈಯುತ್ತಿದ್ದಾರೆ ಎಂದು ಶೇಖರ್‌ ಮಡಿವಾಳ್‌ ವಿಷಾದ ವ್ಯಕ್ತಪಡಿಸಿದರು.

ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತಾದರೂ ಇಂದಿರಾ ಗಾಂಧಿಯವರು ವರ್ಚಸ್ಸು ಮತ್ತು ಪ್ರಭಾವದಿಂದ ಮತ್ತೆ 1980ರಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದು ಸಾಮಾನ್ಯ ಜನತೆಗೆ ತುರ್ತು ಪರಿಸ್ಥಿತಿಯಿಂದ ಪರಿಣಾಮ ಆಗಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಬ್ರಹ್ಮಾನಂದ ಅವರು ತುರ್ತು ಪರಿಸ್ಥಿತಿಯಿಂದ ದೇಶದಲ್ಲಿ ಆರ್ಥಿಕ ಶಿಸ್ತು ಪಾಲನೆಯಾಗಿದೆ ಎಂದು ಬಣ್ಣಸಿದ್ದರು ಎಂದು ಶೇಖರ್‌ ಮಡಿವಾಳ್‌ ತಿಳಿಸಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಜೀವನವೇ ನಮಗೆ ಆದರ್ಶ. ಪ್ರಾಮಾಣಿಕತೆ, ಸರಳತೆ, ನಿಷ್ಕಲ್ಮಶ ರಾಜಕೀಯ ನಡೆಯಿಂದ ಎಲ್ಲರ ಮನ ಗೆದ್ದ ಗೋಪಾಲ ಭಂಡಾರಿ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿ. ಗೋಪಾಲ ಭಂಡಾರಿ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಂದಾಗಿ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಶಾಲಾ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಯಾಗಿದೆ. ಇಂದಿನ ಹಾಗೆ ಅಂದು ಸಾಮಾಜಿಕ ಜಾಲತಾಣವಿರುತ್ತಿದ್ದಲ್ಲಿ ಕಾಂಗ್ರೆಸ್‌ ಕಾರ್ಯಗಳಿಗೂ ಸಾಕಷ್ಟು ಪ್ರಚಾರ ಸಿಗುತ್ತಿತ್ತು ಎಂದು ಶೇಖರ್‌ ಮಡಿವಾಳ್‌ ಹೇಳಿದರು.

ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಣೆ - ಅಭಯಚಂದ್ರ ಜೈನ್‌ 

ವೀರಪ್ಪ ಮೊಯ್ಲಿಯವರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸಿದವರು ಗೋಪಾಲ ಭಂಡಾರಿ ಅವರು. ಜನಪ್ರನಿಧಿಯಾಗೋದು ಸೇವೆಗಾಗಿಯೇ ವಿನಾಃ ಅಧಿಕಾರ, ದರ್ಪ, ಪೌರುಷ ತೋರಿಸುವುದಕ್ಕಲ್ಲ. ಜಾತಿ ಬಲವಿಲ್ಲದ ನನ್ನನ್ನು ಮತ್ತು ಭಂಡಾರಿಯವರನ್ನು ಬಡಜನತ ಸೇವೆ ಮಾಡಬೇಕೆಂದೇ ಶಾಸಕರನ್ನಾಗಿ ಮಾಡಿದರು ಎಂದು ಅಭಯಚಂದ್ರ ಜೈನ್‌ ಹೇಳಿದರು.

ಗೋಪಾಲ ಭಂಡಾರಿ ಅವರ ಭಾವಚಿತ್ರಕ್ಕೆ ನೆರೆದವರು ಪುಷ್ಪನಮನ ಸಲ್ಲಿಸಿದರು. ರಕ್ತದಾನದಲ್ಲಿ ಸುಮಾರು 75 ಯೂನಿಟ್‌ ರಕ್ತ ಸಂಗ್ರಹವಾಯಿತು. ಈ ಸಂದರ್ಭ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಬಂಗೇರಾ, ಜಾರ್ಜ್‌ ಕ್ಯಾಸ್ತಲಿನೋ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News