ಪರಿಷ್ಕೃತ ಪಠ್ಯದಲ್ಲಿ ಆಝಾನ್‌ ನಿಂದ ಶಬ್ಧ ಮಾಲಿನ್ಯ ಎಂಬ ಚಿತ್ರ : ವೈರಲ್‌ ಚಿತ್ರದ ವಾಸ್ತವಾಂಶವೇನು?

Update: 2022-07-04 13:31 GMT

ಹೊಸದಿಲ್ಲಿ: ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ  ಪಠ್ಯಪುಸ್ತಕ ಪರಿಷ್ಕರಣೆ ಭಾರೀ ವಿವಾದ ವಾಗಿರುವ ನಡುವೆಯೇ ಇದೀಗ  ಪಠ್ಯದಲ್ಲಿ ಆಝಾನ್‌ ನಿಂದ  ಶಬ್ಧಮಾಲಿನ್ಯ ಎಂಬಂತೆ ಚಿತ್ರ ಪ್ರಕಟಿಸಿದ್ದಾರೆ ಎಂಬ  ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ ಇದು 2017ರಲ್ಲೇ ವಿವಾದಕ್ಕೀಡಾದ ವಿಚಾರವಾಗಿದೆ ಎಂಬುವುದು ವಾರ್ತಾಭಾರತಿ ಫ್ಯಾಕ್ಟ್‌ ಚೆಕ್‌ ನಡೆಸಿದ ವೇಳೆ ತಿಳಿದು ಬಂದಿದೆ.

ವೈರಲ್ ಆಗುತ್ತಿರುವ ಚಿತ್ರ ರಾಜ್ಯ ಪಠ್ಯ ಪುಸ್ತಕದ ಚಿತ್ರವಲ್ಲ. ಅದು  ಐಸಿಎಸ್‌ಇ ಪಠ್ಯದ ೬ ನೇ ತರಗತಿಯ ವಿಜ್ಞಾನ  ಪುಸ್ತಕದ  ಪುಟವೊಂದರ ಚಿತ್ರ. ಐಸಿಎಸ್‌ಇ ಅಂತಾರಾಷ್ಟ್ರೀಯ ಪಠ್ಯಕ್ರಮವಾಗಿದೆ. ರಾಜ್ಯ ಪಠ್ಯಕ್ರಮ, ಕೇಂದ್ರ ಪಠ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮಗಳು ಬೇರೆ ಬೇರೆ. ಈ ಚಿತ್ರವು ಈ ಹಿಂದೆ ಐಸಿಎಸ್‌ಇ ಸಪಠ್ಯಕ್ರಮದಲ್ಲಿ ಅಳವಡಿಸಿದ್ದು, ವಿವಾದಕ್ಕೀಡಾಗಿತ್ತು. ಸೋನುನಿಗಂ ಆಝಾನ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ವಿವಾದವೂ ಸುದ್ದಿಯಾಗಿತ್ತು. ವಿಜ್ಞಾನ ಪಠ್ಯಪುಸ್ತಕದಲ್ಲಿರುವ ಚಿತ್ರದಲ್ಲಿ ಒಂದು ರೈಲು, ಕಾರು, ವಿಮಾನ ಮತ್ತು ಮಸೀದಿಯನ್ನು ತೋರಿಸಲಾಗಿದ್ದು ಇವುಗಳ ಹೊರತಾಗಿ ಶಬ್ದದಿಂದ ಕಂಗೆಟ್ಟು ತನ್ನ ಕಿವಿಗಳೆರಡನ್ನೂ ಮುಚ್ಚಿರುವ ವ್ಯಕ್ತಿಯೊಬ್ಬನನ್ನು ತೋರಿಸಲಾಗಿತ್ತು.

ಬಳಿಕ ಈ ಕುರಿತು ಆ ಪಠ್ಯಪುಸ್ತಕದ ಪ್ರಕಾಶಕ ಕ್ಷಮೆಯಾಚಿಸಿದ್ದರು ಎಂದು 2017ರಲ್ಲಿ firstpost ವರದಿ ಮಾಡಿತ್ತು. ಪುಸ್ತಕದ ಪ್ರಕಾಶಕ ಸಂಸ್ಥೆ ಸೆಲಿನಾ ಪಬ್ಲಿಷರ್ಸ್ ನ ಹೇಮಂತ್ ಗುಪ್ತಾ ಕ್ಷಮೆಯಾಚಿಸಿದ್ದು "ಮುಂದಿನ ಆವೃತ್ತಿಗಳಲ್ಲಿ ಚಿತ್ರವನ್ನು ಬದಲಾಯಿಸಲಾಗುವುದು ಮತ್ತು ಶಬ್ದಮಾಲಿನ್ಯವಿರುವ ನಗರದಲ್ಲಿ ಶಬ್ದ ಹೊರಸೂಸುವ ವಸ್ತುಗಳ ಹೊರತು ಕೋಟೆಯ ಒಂದು ಭಾಗವನ್ನು ಹೋಲುವ ಕಟ್ಟಡವನ್ನು ತೋರಿಸಲಾಗಿದೆ" ಎಂದೂ ಅವರು ಹೇಳಿಕೊಂಡಿದ್ದರು. ಸದ್ಯ ಆ ಚಿತ್ರವನ್ನು ಬದಲಾಯಿಸಲಾಗಿದೆ. ಆದ್ದರಿಂದ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಚಿತ್ರಕ್ಕೂ ರಾಜ್ಯದ  ನೂತನ ಪರಿಷ್ಕೃತ ಪಠ್ಯಕ್ಕೂ   ಯಾವುದೇ ಸಂಬಂಧವಿಲ್ಲ.

ಬದಲಾವಣೆಗೊಂಡಿರುವ ಚಿತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News