ಆಸ್ಟ್ರೇಲಿಯಾ: ನಿರಂತರ ಮಳೆ, ಪ್ರವಾಹ: 50,000ಕ್ಕೂ ಅಧಿಕ ಮಂದಿಯ ಸ್ಥಳಾಂತರ

Update: 2022-07-05 16:12 GMT

ಸಿಡ್ಡಿ, ಜು.5: ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಸಿಡ್ನಿಯಲ್ಲಿ ಪ್ರವಾಹದ ಸಂಕಷ್ಟ ಎದುರಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ 50,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 
ಸಿಡಿಯ ಪಶ್ಚಿಮದಲ್ಲಿರುವ ಉಪನಗರ ನ್ಯೂ ಸೌತ್ವೇಲ್ಸ್‌ ನ ಸುಮಾರು 50,000 ಮಂದಿಗೆ ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸೂಚನೆ ಮೀರಿದವರಿಗೆ ನೋಟಿಸ್ ನೀಡಿ ಸ್ಥಳಾಂತರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
 
ಜನತೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಧಾರಾಕಾರ ಮಳೆ ಮುಂದುವರಿದಿರುವುದರಿಂದ ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ಬಿಗಡಾಯಿಸಬಹುದು. ರಸ್ತೆಯ ಮೇಲೆಯೂ ಪ್ರವಾಹದ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಎಚ್ಚರಿಕೆ ವಹಿಸಬೇಕು. ಹಠಾತ್ ಪ್ರವಾಹದ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿದೆ ಎಂದು ನ್ಯೂಸೌತ್ ವೇಲ್ಸ್ ನ ಪ್ರೀಮಿಯರ್ ಡೊಮಿನಿಕ್ ಪೆರೊಟೆಟ್ ಹೇಳಿದ್ದಾರೆ. 

ಮಳೆ ಮೋಡಗಳು ಉತ್ತರದತ್ತ ಚಲಿಸುವ ಹಿನ್ನೆಲೆಯಲ್ಲಿ ಮಂಗಳವಾರದ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಬಹುತೇಕ ನದಿ ಜಲಾನಯನ ಪ್ರದೇಶಗಳಲ್ಲಿ ನೆರೆನೀರು ತುಂಬಿರುವುದರಿಂದ ಪ್ರವಾಹದ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
 
ಕೆಲವು ಪ್ರದೇಶಗಳಲ್ಲಿ ಶನಿವಾರದಿಂದ ಮಂಗಳವಾರ ಬೆಳಗ್ಗಿನವರೆಗೆ 800 ಮಿ.ಮೀ ದಾಖಲೆ ಮಳೆಯಾಗಿದ್ದು ಇದು ಆಸ್ಟ್ರೇಲಿಯಾದ ವಾರ್ಷಿಕ ಸರಾಸರಿ 500 ಮಿ.ಮೀಗಿಂತ ಒಂದೂವರೆ ಪಟ್ಟಿಗೂ ಅಧಿಕವಾಗಿದೆ. 

ಮಂಗಳವಾರದಿಂದ ಶನಿವಾರದವರೆಗೆ ಮಳೆಯ ಪ್ರಮಾಣ 125 ಮಿ.ಮೀಗೆ ಇಳಿಯಲಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗಂಟೆಗೆ 90 ಕಿಮೀ ವೇಗದ ಗಾಳಿಯೂ ಬೀಸುವ ಮುನ್ಸೂಚನೆ ಇರುವುದರಿಂದ ವಿದ್ಯುತ್ ಪೂರೈಕೆ ಮತ್ತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
 
ಸಿಡ್ನಿಯ ಪಶ್ಚಿಮದ ನಗರ ವಿಂಡ್ಸರ್ನಲ್ಲಿ ಭೀಕರ ಪ್ರವಾಹದಿಂದಾಗಿ ಬಹುತೇಕ ನದಿ, ಹಳ್ಳ, ತೊರೆ, ಕೆರೆಗಳು ತುಂಬಿ ಹರಿಯುತ್ತಿದ್ದು , ಇದು ಈ ವರ್ಷದಲ್ಲಿ ಎದುರಾದ ಮೂರನೇ ಪ್ರವಾಹದ ಸಮಸ್ಯೆಯಾಗಿದೆ.
 
ನಗರದ ರಸ್ತೆಗಳು, ರೈಲು ಹಳಿಗಳು ನೀರಿನಲ್ಲಿ ಮುಳುಗಿರುವ ಮತ್ತು ಜಲಾವೃತಗೊಂಡಿರುವ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ರಕ್ಷಣಾ ತಂಡದ ಕಾರ್ಯಾಚರಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಕಟಿಸಿವೆ. ಈ ಮಧ್ಯೆ, ಸಿಡ್ನಿಯ ಕಡಲತೀರದಲ್ಲಿ ದಡದಲ್ಲಿ ಲಂಗರು ಹಾಕಿದ್ದ ನೌಕೆಯೊಂದು ಪ್ರಚಂಡ ಗಾಳಿಯ ಹೊಡೆತಕ್ಕೆ ಸಿಲುಕಿ ಸಮುದ್ರದತ್ತ ಚಲಿಸಿದ್ದು ಅದನ್ನು ಮತ್ತೆ ದಡಕ್ಕೆ ಎಳೆದು ತರಲು ರಕ್ಷಣಾ ತಂಡದವರು ಯಶಸ್ವಿಯಾಗಿದ್ದಾರೆ ಎಂದು ತುರ್ತುಪರಿಸ್ಥಿತಿ ನಿರ್ವಹಣಾ ಇಲಾಖೆಯ ಸಚಿವ ಸ್ಟೆಫ್ ಕುಕ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News