ಸ್ವೀಡನ್, ಫಿನ್‌ ಲ್ಯಾಂಡ್ ಸೇರ್ಪಡೆ ಕರಡು‌ ಪ್ರತಿಗೆ ನೇಟೊ ಸದಸ್ಯರ ಸಹಿ

Update: 2022-07-05 16:14 GMT

 ಬ್ರಸೆಲ್ಸ್, ಜು.5: ನೇಟೊ ಒಕ್ಕೂಟಕ್ಕೆ ಸ್ವೀಡನ್, ಫಿನ್ಲ್ಯಾಂಡ್ ದೇಶಗಳ ಸೇರ್ಪಡೆಗೆ ಸಂಬಂಧಿಸಿದ ಕರಡುಪ್ರತಿಗೆ ಮಂಗಳವಾರ ನೇಟೊದ 30 ಸದಸ್ಯರು ಸಹಿ ಹಾಕಿದ್ದು, ಇದೀಗ ಸದಸ್ಯತ್ವ ಕೋರಿದ ಪ್ರಸ್ತಾವನೆಯನ್ನು ಶಾಸಕಾಂಗ ಅನುಮೋದನೆಗಾಗಿ ನೇಟೊ ಸದಸ್ಯ ದೇಶಗಳ ರಾಜಧಾನಿಗೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇದು ನಿಜಕ್ಕೂ ಫಿನ್ಲ್ಯಾಂಡ್, ಸ್ವೀಡನ್ ಮತ್ತು ನೇಟೊಗೆ ಚಾರಿತ್ರಿಕ ಕ್ಷಣವಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್ ಹೇಳಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣ ಮತ್ತು ಮಿಲಿಟರಿ ಹೋರಾಟದ ಹಿನ್ನೆಲೆಯಲ್ಲಿ ಈ ಕ್ರಮವು ರಶ್ಯಾದ ಕಾರ್ಯತಂತ್ರದ ಪ್ರತ್ಯೇಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಳೆದ ವಾರ ನಡೆದಿದ್ದ ನೇಟೊ ಶೃಂಗಸಭೆಯಲ್ಲಿ 30 ಸದಸ್ಯದೇಶದ ಖಾಯಂ ಪ್ರತಿನಿಧಿಗಳು ಸೇರ್ಪಡೆ ನಿರ್ಧಾರವನ್ನು ಔಪಚಾರಿಕವಾಗಿ ಅನುಮೋದಿಸಿದ್ದವು. 
ಸೇರ್ಪಡೆಗೆ ಸದಸ್ಯ ದೇಶಗಳ ಅನುಮೋದನೆ ದೊರೆತರೂ, ಸದಸ್ಯ ದೇಶಗಳ ಸಂಸತ್ತಿನ ಅನುಮೋದನೆ ಪಡೆಯಲು ಬಾಕಿಯಿದೆ. ಅಂತಿಮ ನಿರ್ಣಯಕ್ಕೆ ಟರ್ಕಿ ತೊಡಕಾಗುವ ಸಾಧ್ಯತೆಯಿದೆ. ಸ್ವೀಡನ್, ಫಿನ್ಲ್ಯಾಂಡ್ ನೇಟೊ ಸೇರ್ಪಡೆಗೆ ಟರ್ಕಿ ಆಕ್ಷೇಪ ಎತ್ತಿ ವಿರೋಧಿಸಿದೆ. ಟರ್ಕಿಯಲ್ಲಿ 2016ರಲ್ಲಿ ನಡೆದ ವಿಫಲ ದಂಗೆ ಪ್ರಯತ್ನದ ರೂವಾರಿಯಾದ ಕುರ್ಡಿಷ್ ಬಂಡುಗೋರರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವ ಭಯೋತ್ಪಾದಕರು ಸ್ವೀಡನ್, ಫಿನ್ಲ್ಯಾಂಡ್ನಲ್ಲಿ ತಲೆತಪ್ಪಿಸಿಕೊಂಡಿದ್ದು ಅವರನ್ನು ಹಸ್ತಾಂತರಿಸುವವರೆಗೆ ಈ 2 ದೇಶಗಳ ಸದಸ್ಯತ್ವಕ್ಕೆ ತನ್ನ ವಿರೋಧವಿದೆ ಎಂದು ಟರ್ಕಿ ಮುಖಂಡ ರಿಸೆಪ್ ತಯ್ಯಿಪ್ ಎರ್ಡೋಗನ್ ಎಚ್ಚರಿಸಿದ್ದಾರೆ. 
ನೇಟೊ ಸಂವಿಧಾನದ ಪ್ರಕಾರ, ಹೊಸ ಸದಸ್ಯರ ಸೇರ್ಪಡೆಗೆ ಹಾಲಿ 30 ಸದಸ್ಯರೆಲ್ಲರ ಬೆಂಬಲದ ಅಗತ್ಯವಿದೆ. ಅಂದರೆ, ಎಲ್ಲಾ ಸದಸ್ಯ ದೇಶಗಳಿಗೂ ಸೇರ್ಪಡೆ ತಡೆಯುವ ಅಧಿಕಾರವಿದೆ. ಟರ್ಕಿಯ ವಿರೋಧದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಟಾಲ್ಟನ್ಬರ್ಗ್, ಪ್ರತೀ ದೇಶಕ್ಕೂ ಭದ್ರತೆಯ ವಿಷಯದಲ್ಲಿ ತನ್ನದೇ ಆದ ಆತಂಕವಿರುತ್ತದೆ. ಈ ಕುರಿತ ಸಂದೇಹಗಳನ್ನು ನಿವಾರಿಸುವ ಭರವಸೆಯಿದೆ. ಇದಕ್ಕೆ ಕೆಲವು ತಿಂಗಳು ಬೇಕಾಗಬಹುದು. ಆದರೆ ಸಕಾರಾತ್ಮಕ ಫಲಿತಾಂಶ ಖಚಿತ ಎಂಬ ವಿಶ್ವಾಸವಿದೆ ಎಂದಿದ್ದಾರೆ. 
ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ತ್ವರಿತ ಸೇರ್ಪಡೆಯ ಅಗತ್ಯವನ್ನು ಎತ್ತಿತೋರಿಸಿದೆ. ಸದಸ್ಯತ್ವ ಮಂಜೂರು ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಮುಂದುವರಿಯುವುದೆಂದು ಆಶಿಸುತ್ತೇವೆ ಎಂದು ಫಿನ್ಲ್ಯಾಂಡ್ ವಿದೇಶ ಸಚಿವ ಪೆಕ್ಕಾ ಹವಿಸ್ಟೊ ಹೇಳಿದ್ದಾರೆ. ಈ ಎರಡೂ ದೇಶಗಳಿಗೂ ಅಧಿಕೃತ ಸದಸ್ಯತ್ವ ದೊರಕದಿದ್ದರೂ ಈಗ ನೇಟೊದ ಎಲ್ಲಾ ಸಭೆಗಳಲ್ಲಿ ಕಾಯಂ ಆಹ್ವಾನಿತರಾಗಿ ಭಾಗವಹಿಸುವ ಅವಕಾಶ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News