ಮಹುವಾ ಮೊಯಿತ್ರಾ ಅವರ 'ಕಾಳಿ' ಹೇಳಿಕೆಯಿಂದ ದೂರ ಸರಿದ ಟಿಎಂಸಿ: ಪಕ್ಷವನ್ನು ಟ್ವಿಟರ್ ನಲ್ಲಿ ಅನ್‍ಫಾಲೋ ಮಾಡಿದ ಸಂಸದೆ

Update: 2022-07-06 06:43 GMT

ಹೊಸದಿಲ್ಲಿ: ಲೀನಾ ಮಣಿಮೇಖಲೈ ಅವರ ಕಾಳಿ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ಪಾತ್ರಧಾರಿ ಮಹಿಳೆ ಸಿಗರೇಟ್ ಸೇದುತ್ತಿರುವುದು ಹಾಗೂ ಕೈಯ್ಯಲ್ಲಿ ಎಲ್‍ಜಿಬಿಟಿ ಧ್ವಜ ಹಿಡಿದಿರುವುದು ಕಾಣಿಸಿಕೊಂಡ ನಂತರ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಈ ಪೋಸ್ಟರ್ ಅನ್ನು ಬೆಂಬಲಿಸಿ ಕಾಳಿಯು ಮಾಂಸಾಹಾರ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆ ಎಂದಿದ್ದರು.

ಅವರ ಈ ಹೇಳಿಕೆಯು ವಿವಾದಕ್ಕೀಡಾದ ನಂತರ ಪಕ್ಷ ಅವರ ಹೇಳಿಕೆಯಿಂದ ದೂರ ಸರಿದು ನಿಂತ ಬೆನ್ನಲ್ಲೇ ಮಹುವಾ ಅವರು ಟ್ವಿಟರ್ ನಲ್ಲಿ ಟಿಎಂಸಿ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಅನ್‍ಫಾಲೋ ಮಾಡಿದ್ದಾರೆ.

ಇಂಡಿಯಾ ಟುಡೇ ಕಾಂಕ್ಲೇವ್ ಈಸ್ಟ್ 2022 ನಲ್ಲಿ  ಮಾತನಾಡುವ ವೇಲೆ ಕಾಳಿ ಪೋಸ್ಟರ್ ವಿವಾದದ ಕುರಿತು ಮಹುವಾ ಹೀಗೆ ಹೇಳಿದ್ದರು- "ನೀವು ಸಿಕ್ಕಿಂಗೆ ಹೋಗುವಾಗ ಅಲ್ಲಿ ಕಾಳಿ ಮಾತೆಗೆ ಅವರು ವಿಸ್ಕಿ ನೀಡುವುದನ್ನು ನೋಡಬಹುದು.  ಉತ್ತರ ಪ್ರದೇಶಕ್ಕೆ ಹೋದರೆ ಅಲ್ಲಿ ನೀವು ದೇವರಿಗೆ ಪ್ರಸಾದವಾಗಿ ವಿಸ್ಕಿ ನೀಡುತ್ತೀರಿ ಎಂದು ಹೇಳಿದರೆ ಅದು ಧರ್ಮನಿಂದನೆ ಎನ್ನುತ್ತಾರೆ.''

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಟಿಎಂಸಿ "ಇಂಡಿಯಾಟುಡೆಈಸ್ಟ್ ಕಾಂಕ್ಲೇವ್2022ರಲ್ಲಿ ಮಹುವಾ ಮೊಯಿತ್ರಾ ಅವರು ಕಾಳಿ ಮಾತೆ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ ಆಕೆಯ ವೈಯಕ್ತಿಕ ಅಭಿಪ್ರಾಯವಾಗಿದೆ ಹಾಗೂ ಅದನ್ನು ಪಕ್ಷ ಯಾವುದೇ ರೀತಿಯಲ್ಲಿ ಬೆಂಬಲಿಸುತ್ತಿಲ್ಲ. ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತದೆ,'' ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News