ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಪ್ರವಾಹ: ಓರ್ವ ಮಹಿಳೆ ಮೃತ್ಯು, 6 ಮಂದಿ ನಾಪತ್ತೆ

Update: 2022-07-06 08:16 GMT

ಚಂಡೀಗಢ: ಶಿಮ್ಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೇಘಸ್ಫೋಟ ಹಾಗೂ  ಪ್ರವಾಹದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಹಲವರು ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಮಳೆಯಾಗುತ್ತಿದೆ.

ಮೇಘಸ್ಫೋಟದ ನಂತರ ಕುಲ್ಲು  ಜಿಲ್ಲೆಯ ಮಲಾನಾ ಹಾಗೂ  ಮಣಿಕರಣ್  ಪ್ರದೇಶವು ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಮ್ಲಾದ ಢಲ್ಲಿ ಸುರಂಗದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪುರುಷ ಹಾಗೂ  ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಸಂತ್ರಸ್ತರು, ವಲಸೆ ಕಾರ್ಮಿಕರು ಎಂದು ಹೇಳಲಾಗಿದ್ದು, ಘಟನೆ ಸಂಭವಿಸಿದಾಗ ರಸ್ತೆ ಬದಿಯ ಟೆಂಟ್‌ನಲ್ಲಿ ಮಲಗಿದ್ದರು ಎಂದು ಮೂಲಗಳು ತಿಳಿಸಿವೆ. ಗಾಯಾಳುವನ್ನು ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಏತನ್ಮಧ್ಯೆ, ಕುಲ್ಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಕುರಿತು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News