ನೂಪುರ್ ಶರ್ಮಾ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ಅಜ್ಮೀರ್ ದರ್ಗಾದ ಧರ್ಮಗುರು ಬಂಧನ

Update: 2022-07-06 07:39 GMT

ಹೊಸದಿಲ್ಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದವರಿಗೆ ತನ್ನ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ವೀಡಿಯೊವೊಂದರಲ್ಲಿ ಹೇಳಿದ್ದರೆನ್ನಲಾದ ರಾಜಸ್ಥಾನದ ಅಜ್ಮೀರ್ ದರ್ಗಾದ ಧರ್ಮಗುರುವನ್ನು ಇಂದು ಬಂಧಿಸಲಾಗಿದೆ ಎಂದು ndtv ವರದಿ ಮಾಡಿದೆ.

ಪ್ರವಾದಿ ಮುಹಮ್ಮದ್ ಅವರ ಕುರಿತು ನೂಪರ್ ಹೇಳಿಕೆಗೆ ಭಾರತದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಗಲ್ಫ್ ರಾಷ್ಟ್ರಗಳಿಂದಲೂ ಖಂಡನೆಗೆ ಕಾರಣವಾಯಿತು.

ಸೋಮವಾರ ರಾತ್ರಿ ವಿಡಿಯೋ ಕ್ಲಿಪ್ ಆಧರಿಸಿ ಎಫ್ಐಆರ್ ದಾಖಲಿಸಿದ ನಂತರ ರಾಜಸ್ಥಾನ ಪೊಲೀಸರು ಧರ್ಮಗುರು ಸಲ್ಮಾನ್ ಚಿಸ್ತಿಗಾಗಿ ಹುಡುಕಾಟ ನಡೆಸಿದ್ದರು.

ನೂಪುರ್ ಶರ್ಮಾ ಅವರ ತಲೆಯನ್ನು ತನ್ನ ಬಳಿಗೆ ತರುವ ಯಾರಿಗಾದರೂ ತನ್ನ ಮನೆಯನ್ನು ನೀಡುವೆ. ಪ್ರವಾದಿಯನ್ನು ಅವಹೇಳನ ಮಾಡಿದ್ದಕ್ಕಾಗಿ ಆಕೆಯನ್ನು ನಾನೇ ಗುಂಡಿಕ್ಕಿ ಸಾಯಿಸುವುದಾಗಿ ಸಲ್ಮಾನ್ ಚಿಸ್ತಿ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. 

ಆರೋಪಿಯು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿ ಈ ವಿಡಿಯೋವನ್ನು ಖಂಡಿಸಿದೆ ಹಾಗೂ ದರ್ಗಾವು ಕೋಮು ಸೌಹಾರ್ದತೆಯ ಸ್ಥಳವಾಗಿದೆ ಎಂದು ಅದು  ಹೇಳಿದೆ.

‘ಖದೀಮ್’ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದರ್ಗಾದ ಸಂದೇಶವೆಂದು ಪರಿಗಣಿಸಲಾಗುವುದಿಲ್ಲ. ಇದು ಒಬ್ಬ ವ್ಯಕ್ತಿಯ ಹೇಳಿಕೆಯಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದು ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News