ಸುಪ್ರೀಂ ಕದ ತಟ್ಟಿದ ಝೀ ನಿರೂಪಕ ರೋಹಿತ್ ರಂಜನ್

Update: 2022-07-06 08:59 GMT
ರೋಹಿತ್ ರಂಜನ್ (Photo: Twitter)

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಯನಾಡ್ ಕಚೇರಿಯಲ್ಲಿ ನಡೆದ ದಾಂಧಲೆ ಕುರಿತು ನೀಡಿದ್ದ ಪ್ರತಿಕ್ರಿಯೆಯನ್ನು ಉದಯಪುರ್ ಟೈಲರ್ ಹತ್ಯೆ ಘಟನೆಗೆ ಪ್ರತಿಕ್ರಿಯೆ ಎಂಬಂತೆ ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಂಗಳವಾರ  ಬಂಧಿತರಾಗಿದ್ದ ಹಾಗೂ ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.

ಆದರೆ ಅವರ ಅರ್ಜಿ ಕೋರ್ಟ್ ದಾಖಲೆಗಳಲ್ಲಿ ನಮೂದಾಗಿರಲಿಲ್ಲ ಎಂದು ಹೇಳಲಾಗಿದೆ.

ಇದರಿಂದ ರಂಜನ್ ಪರ ವಕೀಲ ಸಿದ್ಧಾರ್ಥ್ ಲುಥ್ರಾ ಕ್ಷಮೆಯಾಚಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದೆಯೆಂದು ಕೋರ್ಟ್ ನಿಗದಿಪಡಿಸಿದ್ದರೂ ಅರ್ಜಿಯು ದಾಖಲೆಗಳಲ್ಲಿ ನೋಂದಣಿಯಾಗಿಲ್ಲ ಎಂದು ನಂತರ ತಿಳಿದು ಬಂದಿತ್ತು, ಇದನ್ನು ಜಸ್ಟಿಸ್ ಇಂದಿರಾ ಬ್ಯಾನರ್ಜಿ ಪ್ರಶ್ನಿಸಿದ್ದರು.

"ರಂಜನ್ ಅವರನ್ನು ನಿನ್ನೆ ನೊಯ್ಡಾ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಅವರು ತಮ್ಮ ಒಂದು ಶೋ ನಲ್ಲಿ ತಪ್ಪು ಮಾಡಿದ್ದರು. ಈಗ ಛತ್ತೀಸಗಢ ಪೊಲೀಸರು ಅವರನ್ನು ಬಂಧಿಸಲು ಬಯಸಿದ್ದಾರೆ. ಈ ಅರ್ಜಿಯ ತುರ್ತು ವಿಚಾರಣೆ ನಿಗದಿಪಡಿಸಿ, ಇಲ್ಲದೇ ಹೋದಲ್ಲಿ ಅವರನ್ನು ಮತ್ತೆ ಕಸ್ಟಡಿಗೆ ಪಡೆದುಕೊಳ್ಳಬಹುದು,'' ಎಂದು ಅವರ ವಕೀಲರು ಕೋರಿದರು.

ರಂಜನ್ ವಿರುದ್ಧ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಪ್ರಕರಣ ದಾಖಲಾಗಿವೆ. ನಿನ್ನೆ ಛತ್ತೀಸಗಢ ಪೊಲೀಸರು ಅವರನ್ನು ಬಂಧಿಸಲೆಂದು ಅವರ ನಿವಾಸಕ್ಕೆ ಆಗಮಿಸಿದ್ದರೂ ಅದಾಗಲೇ ಅಲ್ಲಿಗೆ ನೊಯ್ಡಾ ಪೊಲೀಸರು ಆಗಮಿಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News