ಆಧಾರ್ ಡೇಟಾ ಸೋರಿಕೆಯಾದರೆ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ: ಚುನಾವಣಾ ಆಯೋಗದ ಎಚ್ಚರಿಕೆ

Update: 2022-07-06 10:06 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮತದಾರರ ಆಧಾರ್ ವಿವರಗಳಿರುವ ಭೌತಿಕ ದಾಖಲೆಗಳು ಸೋರಿಕೆಯಾಗಿದ್ದೇ ಆದಲ್ಲಿ ಮತದಾರರ ನೋಂದಣಿ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿ ಕೇಂದ್ರ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೋಮವಾರ ಪತ್ರ ಬರೆದಿದೆ.

ಆಧಾರ್ ಸಂಖ್ಯೆಗಳನ್ನು ಒಳಗೊಂಡಿರುವ ಭೌತಿಕ ಪ್ರತಿಗಳಾದ ಫಾರ್ಮ್-6ಬಿ ಅನ್ನು ಆಧಾರ್ ನಿಯಮಗಳು 2022 ಅನ್ವಯ ಸಂರಕ್ಷಿಸಬೇಕು. ಈ ನಿಯಮದ ಪ್ರಕಾರ ಸಂಗ್ರಹಿಸಲಾದ ಆಧಾರ್ ಸಂಖ್ಯೆಗಳು ಅಥವಾ ಆಧಾರ್ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸುವ ಮೊದಲು ಅವುಗಳ ಮೊದಲ ಎಂಟು ಅಂಕಿಗಳನ್ನು ರಿಡ್ಯಾಕ್ಟ್ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

"ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಡಿಜಿಟಲೀಕರಣದ ನಂತರ ಡಬಲ್ ಲಾಕ್ ನೊಂದಿಗೆ ಮತದಾರರ ನೋಂದಣಿ ಅಧಿಕಾರಿಗಳು ಸುರಕ್ಷಿತವಾಗಿರಿಸಬೇಕು, ಯಾವುದೇ ಮಾಹಿತಿ ಸೋರಿಕೆಯಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು,'' ಎಂದು ಪತ್ರ ಹೇಳಿದೆ.

"ಮತದಾರರು ಆಧಾರ್ ಮಾಹಿತಿಗಳನ್ನು ಒದಗಿಸುವುದು ಸಂಪೂರ್ಣವಾಗಿ ಅವರ ವಿವೇಚನೆಗೆ ಬಿಟ್ಟಿದ್ದು,'' ಎಂಬ ಅಂಶವನ್ನೂ ಪತ್ರ ಸ್ಪಷ್ಟಪಡಿಸಿದೆ.

ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ದೃಢಪಡಿಸಲು ಹಾಗೂ ಭವಿಷ್ಯದಲ್ಲಿ ಉತ್ತಮ ಸೇವೆಗಳನ್ನು ಒದಗಿಸಲು ಆಧಾರ್ ವಿವರಗಳನ್ನು ಮತದಾರರ ಪಟ್ಟಿಗಾಗಿ ಕೇಳಲಾಗುತ್ತದೆ ಎಂಬ ಅಂಶವನ್ನು ಅಧಿಕಾರಿಗಳು ಸಾರ್ವಜನಿಕರಿಗೆ ವಿವರಿಸುತ್ತಾರೆ ಎಂದೂ ಪತ್ರ ಹೇಳಿದೆ.

ಮತದಾರರ ಪಟ್ಟಿಯನ್ನು ಆಧಾರ್ ಜೊತೆಗೆ ಜೋಡಿಸುವುದಕ್ಕೆ ಅನುಮತಿಸಿ ಕೇಂದ್ರ ಸರಕಾರ ಜೂನ್ 17ರಂದು ಅಧಿಸೂಚನೆ ಹೊರಡಿಸಿದ ನಂತರದ ಬೆಳವಣಿಗೆಯಲ್ಲಿ ಮೇಲಿನ ಪತ್ರ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News