ಕಾಳಿ ದೇವಿಯ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಎಫ್ ಐಆರ್

Update: 2022-07-06 12:00 GMT
ಮಹುವಾ ಮೊಯಿತ್ರಾ (Photo:PTI)

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಾಳಿ ದೇವಿಯ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಪ್ರಕರಣ ಎದುರಿಸುತ್ತಿದ್ದಾರೆ.

ಮೊಯಿತ್ರಾ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಜಿತೇನ್ ಚಟರ್ಜಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಹುವಾ "ಬಿಜೆಪಿ ಹಾಗೆಯೇ ಮಾಡಿ! ನಾನು ಕಾಳಿಯ ಆರಾಧಕಿ, ಯಾವುದಕ್ಕೂ ಭಯ ಪಡುವುದಿಲ್ಲ, ನಿಮ್ಮ ಅಜ್ಞಾನದ ಮಾತುಗಳು, ನಿಮ್ಮ ಗೂಂಡಾಗಳು ಅಥವಾ ನಿಮ್ಮ ಪೊಲೀಸರು, ಖಂಡಿತವಾಗಿಯೂ ನಿಮ್ಮ ಟ್ರೋಲ್‍ಗಳಿಗೂ ಭಯಪಡುವುದಿಲ್ಲ, ಸತ್ಯಕ್ಕೆ ಯಾವುದೇ ಬೆಂಬಲ ಅಗತ್ಯವಿಲ್ಲ,'' ಎಂದು ಟ್ವೀಟ್ ಮಾಡಿದ್ದಾರೆ.

ಇಂಡಿಯಾ ಟುಡೇ ಕಾಂಕ್ಲೇವ್‍ನಲ್ಲಿ ಮಹುವಾ ತಮ್ಮ ವಿವಾದಾತ್ಮಕ ಮಾತುಗಳನ್ನು ಆಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಹಿಂದು ದೇವರುಗಳಿಗೆ ಅವಮಾನ ಮಾಡುವುದು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಅಧಿಕೃತ ನಿಲುವೇ ಎಂದು ಪ್ರಶ್ನಿಸಿತ್ತು.

ಇದಾದ ನಂತರ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿ ಮಹುವಾ ಹೇಳಿಕೆ ಖಂಡಿಸಿ ಪಕ್ಷ ಇದನ್ನು ಬೆಂಬಲಿಸುವುದಿಲ್ಲವೆಂದು ಹೇಳಿತ್ತು. ನಂತರದ ಬೆಳವಣಿಗೆಯಲ್ಲಿ ಮಹುವಾ ಅವರು ತೃಣಮೂಲದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಅನ್‍ಫಾಲೋ ಮಾಡಿದ್ದರು. ತಾವು ಯಾವುದೇ ಚಿತ್ರ ಯಾ ಪೋಸ್ಟರ್ ಬೆಂಬಲಿಸಿಲ್ಲ ಅಥವಾ ಸಿಗರೇಟ್ ಸೇವನೆ ಪದ ಬಳಸಿಲ್ಲ ಎಂದು ಮಹುವಾ ನಂತರ ಸ್ಪಷ್ಟಪಡಿಸಿದ್ದರು.

"ಎಲ್ಲಾ ಸಂಘಿಗಳಿಗೆ- ಸುಳ್ಳು ಹೇಳುವುದರಿಂದ ನೀವು ಉತ್ತಮ ಹಿಂದುಗಳಾಗುವುದಿಲ್ಲ. ನಾನು ಯಾವುದೇ ಚಿತ್ರ ಯಾ ಪೋಸ್ಟರ್ ಬೆಂಬಲಿಸಿಲ್ಲ ಅಥವಾ ಸಿಗರೇಟ್ ಸೇವನೆ ಪದ ಬಳಸಿಲ್ಲ. ನೀವು ತಾರಾಪೀಠ್‍ನಲ್ಲಿರುವ ಮಾ ಕಾಳಿ ಮಂದಿರಕ್ಕೆ ಭೇಟಿ ನೀಡಿ  ಭೋಗ್ ಆಗಿ ಯಾವ ಆಹಾರ ಮತ್ತು ಪಾನೀಯ ನೀಡಲಾಗುತ್ತಿದೆ ಎಂದು ನೋಡಿ, ಜಯ್ ಮಾ ತಾರಾ,'' ಎಂದು ಮಹುವಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News