ಸಂವಿಧಾನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇರಳ ಸಚಿವ ಸಾಜಿ ಚೆರಿಯನ್‌ ರಾಜೀನಾಮೆ

Update: 2022-07-06 14:47 GMT
ಸಾಜಿ ಚೆರಿಯನ್‌ 

ಕೊಚ್ಚಿ: ಇತ್ತೀಚೆಗೆ ಸಂವಿಧಾನದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾದ ಬಳಿಕ ಕೇರಳ ಸಚಿವ ಸಾಜಿ ಚೆರಿಯನ್ ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇರಳ ಸಚಿವ ಸಂಪುಟದಲ್ಲಿ ಸಾಂಸ್ಕೃತಿಕ, ಮೀನುಗಾರಿಕೆ ಮತ್ತು ಯುವಜನ ಖಾತೆಗಳನ್ನು ಹೊಂದಿದ್ದ ಚೆರಿಯನ್, ಮುಖ್ಯಮಂತ್ರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಿಎಂ ಪಿಣರಾಯಿ ವಿಜಯನ್ ಅವರಿಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು. ಸಚಿವ ಸ್ಥಾನವನ್ನು ತ್ಯಜಿಸುವುದು ತನ್ನ ಸ್ವತಂತ್ರ ನಿರ್ಧಾರ ಎಂದು ಚೆರಿಯನ್ ಹೇಳಿದ್ದಾರೆ. 

ತನ್ನ ಇತ್ತೀಚಿನ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಥವಾ ಭಾಗಶಃ ತುಣುಕನ್ನು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿದ್ದರಿಂದ ಅವರು ಸಂವಿಧಾನವನ್ನು ಅಗೌರವಿಸಿದ್ದಾರೆ ಎಂಬ ತಪ್ಪು ಸಂದೇಶವನ್ನು ರವಾನೆಯಾಗಿದೆ. ಸಂವಿಧಾನವನ್ನು ಅವಮಾನಿಸುವ ಯಾವ ಉದ್ದೇಶವೂ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಎರಡು ಬಾರಿ ಶಾಸಕ ಮತ್ತು ಮೊದಲ ಬಾರಿಗೆ ಸಚಿವರಾಗಿರುವ ಚೆರಿಯನ್ 2018 ರಿಂದ ರಾಜ್ಯ ವಿಧಾನಸಭೆಯಲ್ಲಿ ಚೆಂಗನ್ನೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 

ಎಸ್‌ಎಫ್‌ಐ ಮತ್ತು ಡಿವೈಎಫ್‌ಐನ  ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಚೆರಿಯನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News