10,000 ಮನೆಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಕಾರಣವಾದ ಹಾವು!

Update: 2022-07-06 16:02 GMT
ಸಾಂದರ್ಭಿಕ ಚಿತ್ರ (outlookindia.com)

ಟೋಕಿಯೋ: ಹಾವೊಂದು ವಿದ್ಯುತ್ ಸಬ್‌ಸ್ಟೇಷನ್‌ಗೆ ನುಗ್ಗಿದ ಪರಿಣಾಮ ಸುಮಾರು 10,000 ಮನೆಗಳು ವಿದ್ಯುತ್ ಸಂಪರ್ಕ ಕಡಿತಗೊಂಡ ಘಟನೆ ಜಪಾನ್‌ನಲ್ಲಿ ಇತ್ತೀಚೆಗೆ ನಡೆದಿದೆ.

ನ್ಯೂಸ್‌ವೀಕ್ ಪ್ರಕಾರ, ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ನಗರದ ನಿವಾಸಿಗಳು ಜೂನ್ 29 ರಂದು ವಿದ್ಯುತ್ ಕಡಿತವನ್ನು ಎದುರಿಸಿದ್ದಾರೆ. ಮಧ್ಯಾಹ್ನದ ಹೊತ್ತು ಏಕಾಏಕಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಸೆಕೆಯಲ್ಲಿ ಅಲ್ಲಿನ ನಿವಾಸಿಗಳು ಪರಿತಪಿಸಿದ್ದಾರೆ ಎಂದು ವರದಿಯಾಗಿದೆ.

ವಿದ್ಯುತ್ ಸ್ಥಗಿತದ ಕಾರಣವನ್ನು ಪತ್ತೆಹಚ್ಚಿದ ತೊಹೊಕು ಎಲೆಕ್ಟ್ರಿಕ್ ಪವರ್ ಕಂಪನಿಯ ತನಿಖಾಧಿಕಾರಿಗಳು, ಕೆಲವು ಯಂತ್ರೋಪಕರಣಗಳಲ್ಲಿ ಹಾವಿನ ಸುಟ್ಟ ಅವಶೇಷಗಳನ್ನು ಕಂಡಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಹಾವು ಪತ್ತೆಯಾಗುವ ಸಂದರ್ಭದಲ್ಲೂ ಅದು ಉರಿಯುತ್ತಿತ್ತು. ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದಿದ್ದ ಪರಿಣಾಮವಾಗಿ, ಎಚ್ಚರಿಕೆಯ ಅಲಾರಾಮ್‌ ಹೊಡೆದುಕೊಂಡಿದ್ದು, ತಕ್ಷಣವೇ ಆರು ಅಗ್ನಿಶಾಮಕ ಟ್ರಕ್‌ಗಳು ಕೂಡ ಘಟನಾ ಸ್ಥಳಕ್ಕೆ ತಲುಪಿದೆ. ಶಾರ್ಟ್ ಸರ್ಕ್ಯೂಟ್ ನಿಂದ ತಪ್ಪಿಸಿಕೊಳ್ಳಲು ಆಟೋಮ್ಯಾಟಿಕ್‌ ತಂತ್ರಜ್ಞಾನದ ಮುಖಾಂತರ ಸ್ವಯಂಚಾಲಿತವಾಗಿ ವಿದ್ಯುತ್‌ ಸೇವೆ ಸ್ಥಗಿತಗೊಂಡಿದೆ  ಎಂದು ಮಾಧ್ಯಮಗಳು ವರದಿ ಮಾಡಿದೆ.

10,000 ಮನೆಗಳು ಮತ್ತು ಅಂಗಡಿಗಳಿಗೆ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಲು ಸುಮಾರು ಒಂದು ಗಂಟೆ ತೆಗೆದುಕೊಂಡಿದೆ. ಹಾವಿನ ಕುರಿತಾದ ಸುದ್ದಿಯು ನಿವಾಸಿಗಳಲ್ಲಿ ಹೆಚ್ಚಿನ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಗರದ ವಿದ್ಯುತ್ ಸೌಲಭ್ಯಗಳನ್ನು ಹಾವು ಎಷ್ಟು ಸುಲಭವಾಗಿ ನಿಷ್ಕ್ರಿಯಗೊಳಿಸಿದೆ ಎಂದು ಕೆಲವರು ಆಘಾತ ವ್ಯಕ್ತಪಡಿಸಿದ್ದಾರೆ ಎಂದು ಜಪಾನ್ ಟುಡೆಯನ್ನು ಉಲ್ಲೇಖಿಸಿ, ನ್ಯೂಸ್‌ವೀಕ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News