ಕೆನಡ: ‘ಕಾಳಿ’ ಪ್ರದರ್ಶನ ರದ್ದುಪಡಿಸಿದ ಆಗಾ ಖಾನ್ ಮ್ಯೂಸಿಯಂ

Update: 2022-07-06 17:16 GMT

 ಟೊರಾಂಟೊ,ಜು.6: ಕೆನಡದ ಚಲನಚಿತ್ರ ನಿರ್ದೇಶಕಿ ಲೀನಾ ಮಣಿಮೇಖಲೈ ಅವರ ಕಾಳಿ ಚಿತ್ರದ ಪೋಸ್ಟರ್ ವಿವಾದದ ಬಿರುಗಾಳಿಯೆಬ್ಬಿಸಿರುವಂತೆಯೇ, ಟೊರಾಂಟೊದಲ್ಲಿನ ಆಗಾ ಖಾನ್ ಮ್ಯೂಸಿಯಂ ಈ ವಿಡಿಯೋ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಿದೆ.

 ಕಾಳಿ ಸೇರಿದಂತೆ ಟೊರಾಂಟೊ ಮೆಟ್ರೊಪಾಲಿಟನ್ ವಿವಿಯ ‘ಅಂಡರ್ ದಿ ಟೆಂಟ್’ ಪ್ರಾಜೆಕ್ಟ್‌ನಡಿ ಪ್ರದರ್ಶಿಸಲಾಗುವ ಸಾಕ್ಷಚಿತ್ರಗಳಿಗೆ ಆಗಾ ಖಾನ್ ಮ್ಯೂಸಿಯಂ ಆತಿಥ್ಯ ವಹಿಸಿತ್ತು.

 ಆಗಾ ಖಾನ್ ಮ್ಯೂಸಿಯಂ ಮಂಗಳವಾರ ಹೇಳಿಕೆಯೊಂದನ್ನು ನೀಡಿ ಹಿಂದೂ ಹಾಗೂ ಇತರ ಸಮುದಾಯಗಳ ಸದಸ್ಯರ ಭಾವನೆಗಳಿಗೆ ನೋವಾಗಿರುವುದಕ್ಕಾಗಿ ಕ್ಷಮೆಯಾಚಿಸಿದೆ ಹಾಗೂ ಕಾಳಿ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. ಈ ವಿವಾದಾತ್ಮಕ ಚಿತ್ರಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಪೋಸ್ಟರನ್ನು ತೆಗೆದುಹಾಕುವಂತೆ ಕೆನಡದ ರಾಜಧಾನಿ ಒಟ್ಟಾವದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಆಗ್ರಹಿಸಿದ ಬೆನ್ನಲ್ಲೇ ಆಗಾ ಖಾನ್ ಮ್ಯೂಸಿಯಂ ಈ ಕ್ರಮವನ್ನು ಕೈಗೊಂಡಿದೆ.

 ಭಾರತೀಯ ಮೂಲ ನಿರ್ದೇಶಕಿ ಮಣಿಮೇಖಲೈ ಅವರು ತನ್ನ ನಿರ್ದೇಶನದ ಕಾಳಿ ಟಿತ್ರದ ಪೋಸ್ಟರ್ ಒಂದನ್ನು ಶನಿವಾರ ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ್ದು ಅದರಲ್ಲಿ ಕಾಳಿದೇವಿಯು ಸಿಗರೇಟು ಸೇದುತ್ತಿರುವುದನ್ನು ಹಾಗೂ ಒಂದು ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಧ್ವಜವನ್ನು ಹಿಡಿದಿರುವುದನ್ನು ತೋರಿಸಲಾಗಿತ್ತು.

ಈ ಪೋಸ್ಟರ್‌ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾರತದಲ್ಲಿ ‘ಗೋಮಹಾಸಭಾ’ ಎಂಬ ಹೆಸರಿನ ಸಂಘಟನೆಯ ಸದಸ್ಯರೊಬ್ಬರು ಮಣಿಮೇಖಲೈ ವಿರುದ್ಧ ದೂರು ನೀಡಿದ್ದನು.

 ವಿವಾದಿತ ಕಾಳಿ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿರುವ ಕೋಲಾಹಲದ ಬಗ್ಗೆ ಪ್ರತಿಕ್ರಿಯಿಸಿರುವ ಆಗಾ ಖಾನ್ ವಸ್ತುಸಂಗ್ರಹಾಯವು ಕಾಳಿ ಚಿತ್ರವು ಪ್ರಮಾದವಶಾತ್ ಆಗಿ ಹಿಂದೂ ಹಾಗೂ ಇತರ ಸಮುದಾಯಗಳ ಸದಸ್ಯ ಭಾವನೆಗಳಿಗೆ ಅಪಮಾನವುಂಟು ಮಾಡಿರುವುಕಾಗಿ ತಾನು ಗಾಢವಾಗಿ ಕ್ಷಮೆಯಾಚಿಸುವುದಾಗಿ ಹೇಳಿದೆ. ‘‘ ವೈವಿಧ್ಯಮಯ ಧಾರ್ಮಿಕ ಅಭಿವ್ಯಕ್ತಿಗಳು ಹಾಗೂ ಧರ್ಮಗಳಿಗೆ ಗೌರವವನ್ನು ನೀಡುವುದು , ಈ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ,ಮ್ಯೂಸಿಂಯನಲ್ಲಿ ಈ ಚಿತ್ರ (ಕಾಳಿ)ವನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

 ಕಾಳಿ ಚಿತ್ರವು ‘ಅಂಡರ್ ದಿ ಟೆಂಟ್’ ಪ್ರಾಜೆಕ್ಟ್‌ನಡಿ ಪ್ರದರ್ಶಿಸಲಾಗುವ 18 ಕಿರು ವಿಡಿಯೋಚಿತ್ರಗಳಲ್ಲೊಂದಾಗಿದೆ. ಕಲೆಗಳ ಮೂಲಕ ಅಂತರ್ ಸಂಸ್ಕೃತಿಯ ಅರಿವು ಹಾಗೂ ಸಂವಹನವನ್ನು ಬೆಳೆಸುವ ತನ್ನ ಚಿಂತನೆಗೆ ಅನುಗುಣವಾಗಿ ಆಗಾಖಾನ್ ಮ್ಯೂಸಿಯಂ ಈ ಸಾಕ್ಷಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

    ಕಾಳಿ ಚಿತ್ರದ ವಿವಾದಿತ ಪೋಸ್ಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೆನಡದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಹಿಂದೂ ದೇವತೆಗನ್ನು ಅವಮಾನಕಾರಿಯಾಗಿ ಬಿಂಬಿಸಿರುವುದರ ಕುರಿತು ಕೆನಡಾದಲ್ಲಿನ ಹಿಂದೂ ಸಮುದಾಯಗಳ ನಾಯಕರಿಂದ ತನಗೆ ದೂರುಗಳು ಬಂದಿರುವುದಾಗಿ ತಿಳಿಸಿತ್ತು. ಇಂತಹ ಎಲ್ಲಾ ಪ್ರಚೋದನಕಾರಿ ಸಾಮಾಗ್ರಿಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಹಾಗೂ ಕೆನಡಾದ ಅಧಿಕಾರಿಗಳನ್ನು ತಾನು ಆಗ್ರಹಿಸುವುದಾಗಿ ಭಾರತೀಯ ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿತ್ತು.

   ತನ್ನ ನಿರ್ದೇಶನದ ಕಾಳಿ ಚಿತ್ರದ ವಿವಾದಿತ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿರುವ ಲೀನಾ ಮಣಿಮೇಖಲೈ ಅವರು ‘ನಾನು ಜೀವಂತವಿರುವವರೆಗೆ ನನ್ನ ಧ್ವನಿಯನ್ನು ನಿರ್ಭೀತವಾಗಿ ಬಳಸಿಕೊಳ್ಳುವುದನ್ನು ಮುಂದುವರಿಸುವೆ’ ಎಂದು ಹೇಳಿದ್ದಾರೆ.

ನಿರ್ಭೀತ ಧ್ವನಿಯೊಂದಿಗೆ ಬದುಕಲು ಬಯಸುತ್ತೇನೆ: ಮಣಿಮೇಖಲೈ

 ‘‘ನಾನು ಕಳೆದುಕೊಳ್ಳುವುದು ಏನೂ ಇಲ್ಲ. ನಾನು ನಂಬಿರುವುದನ್ನು ನಿರ್ಭೀತಿಯಿಂದ ಹೇಳುವ ಧ್ವನಿಯೊಂದಿಗೆ ನಾನು ಬದುಕಲು ಬಯಸುತ್ತೇನೆ. ಅದಕ್ಕೆ ನನ್ನ ಜೀವವೇ ಬೆಲೆ ಎಂದಾದರೆ ಅದನ್ನು ಕೂಡಾ ಕೊಡಲು ಸಿದ್ಧನಿದ್ದೇನೆ’’ ಎಂದು ಕಾಳಿ ಚಿತ್ರದ ನಿರ್ದೇಶಕಿ ಮಣಿ ಮೇಖಲೈ ಅವರು ಟ್ವಿಟ್ಟರ್‌ನಲ್ಲಿ ತಮಿಳುಭಾಷೆಯಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ‘‘ ಟೊರಾಂಟೊ ನಗರದಲ್ಲಿ ಒಂದು ಸುಂದರ ಸಂಜೆ ಹೊತ್ತಲ್ಲಿ ಕಾಳಿ ದೇವಿ ತಿರುಗಾಡುವಾಗ ನಡೆಯುವ ಘಟನೆಗಳ ಕುರಿತಾದ ಕಾಲ್ಪನಿಕ ಚಿತ್ರ ಇದಾಗಿದೆ. ಈ ಚಿತ್ರವನ್ನು ನೀವು ನೋಡಿದಲ್ಲಿ, ನೀವು ‘ಲೀನಾ ಮಣಿಮೇಖಲೈಯನ್ನು ಬಂಧಿಸಿ’ ಎನ್ನುವ ಬದಲು ‘‘ಲೀನಾ ಮಣಿಮೇಖಲೈ ನಿಮಗೆ ನಮ್ಮ ಒಲುಮೆಗಳು’ ಎನ್ನುವಿರಿ’ ’ ಎಂದು ಮಣಿಮೇಖಲೈ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News