ಮಂಗಳೂರು: ಗೌರವ ಡಾಕ್ಟರೇಟ್ ಪುರಸ್ಕೃತರಿಗೆ ಪೌರ ಸನ್ಮಾನ

Update: 2022-07-07 15:01 GMT

ಮಂಗಳೂರು: ಗುಲ್ಬರ್ಗ ಮತ್ತು ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ದ.ಕ.ಜಿಲ್ಲೆಯ ಗಣ್ಯರನ್ನು ಮಂಗಳೂರಿನ ಪೌರ ಸನ್ಮಾನ ಸಮಿತಿಯ ವತಿಯಿಂದ ಗುರುವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಹಾಗೂ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಹರಿಕೃಷ್ಣ ಪುನರೂರು, ಡಾ.ದೇವದಾಸ್ ಕಾಪಿಕಾಡ್ (ಧರ್ಮಸ್ಥಳದ ಡಾ.ಹೇಮಾವತಿ ವಿ. ಹೆಗ್ಗಡೆ ಗೈರಾಗಿದ್ದರು) ಅವರನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು ‘ಇತ್ತೀಚಿನ ದಿನಗಳಲ್ಲಿ ವಿವಿಗಳು ನೀಡುವ ಗೌರವ ಡಾಕ್ಟರೇಟ್ ಪದವಿಗಳು ಟೀಕೆಗೆ ಗುರಿಯಾಗುತ್ತಿವೆ. ಆದರೆ ಗುಲ್ಬರ್ಗ ಮತ್ತು ಮಂಗಳೂರು ವಿವಿಯು ಈ ಬಾರಿ ದ.ಕ.ಜಿಲ್ಲೆಯ ನಾಲ್ವರು ಅರ್ಹ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಅದರ ಮೌಲ್ಯ ಹೆಚ್ಚಿಸಿದೆ. ನಾಲ್ಕು ಮಂದಿ ಗಣ್ಯರು ಕೂಡ ಬೇರೆ ಬೇರೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಗೌರವ ಡಾಕ್ಟರೇಟ್ ಪದವಿಯ ಮೌಲ್ಯ ಹೆಚ್ಚಿಸಿದ್ದಾರೆ. ಇಂತಹ ಸಾಧಕರನ್ನು ಪೌರ ಸನ್ಮಾನ ಮಾಡಿರುವುದು ಶ್ಲಾಘನೀಯ ಎಂದರು.

ಜಗತ್ತಿನಲ್ಲೇ ಭಾರತವು ಯುವ ಸಮೂಹವನ್ನು ಹೊಂದಿದ ದೇಶವಾಗಿದೆ. ೨೦೫೫ರವರೆಗೂ ಈ ಸ್ಥಾನ ಭಾರತದಲ್ಲೇ ಇರಲಿದೆ. ಅದರೊಳಗೆ ಯುವ ಸಮೂಹದ ಶಕ್ತಿಯನ್ನು ಸದುಪಯೋಗಪಡಿಸಬೇಕಿದೆ. ಅದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ರೂಪಿಸಬೇಕಿದೆ. ಈ ಅವಕಾಶವನ್ನು ಈಗ ಸದುಪಯೋಗಪಡಿಸಿಕೊಳ್ಳದಿದ್ದರೆ ಮುಂದೆಂದೂ ಇಂತಹ ಅವಕಾಶವನ್ನು ಪಡೆಯಲು ಸಾಧ್ಯವಿಲ್ಲ. ಅದು ಬೇರೆ ದೇಶದ ಪಾಲಾಗಬಹುದು ಎಂದು ಡಾ. ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

ಅಭಿನಂದನಾ ಭಾಷಣ ಮಾಡಿದ ನಿಟ್ಟೆ ಪರಿಗಣಿತ ವಿವಿ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ‘ನಿಟ್ಟೆ ಮತ್ತು ಯೆನೆಪೊಯ ವಿವಿಯು ತೀರಾ ಹತ್ತಿರದಲ್ಲಿದೆ. ಅಷ್ಟೇ ಅಲ್ಲ, ನಾವೂ ಕೂಡ ಆತ್ಮೀಯರಾಗಿದ್ದೇವೆ. ನನ್ನ ಮತ್ತು ಅಬ್ದುಲ್ಲ ಕುಂಞಿ ಅವರ ಧಾರ್ಮಿಕ ನಂಬಿಕೆ ಬೇರೆಯಾಗಿರಬಹುದು. ಆದರೆ ನಮ್ಮ ಸಹೋದರತೆ, ಸಹಬಾಳ್ವೆ, ವಿಶ್ವಾಸ, ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಅನ್ಯೋನ್ಯತೆಯಿಂದಿದ್ದೇವೆ. ಆ ಮೂಲಕ ಸೌಹಾರ್ದದ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಇಂತಹ ಸಂಸ್ಕಾರವನ್ನು ನಾವು ಮನೆಯಲ್ಲೇ ಕಲಿತಿದ್ದೇವೆಯೇ ವಿನಃ ಯಾವುದೇ ಕಾಲೇಜಿನಿಂದ ಅಲ್ಲ. ನಮಗೆ ಧರ್ಮ ಬೇಕು, ಆದರೆ ಅದೇ ಮುಖ್ಯವಾಗಬಾರದು. ಅದು ಬದುಕಿನ ಒಂದು ಭಾಗ ಎಂದು ಭಾವಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯು ರಾಜಕೀಯ ರಹಿತವಾಗಿ ಅಭಿವೃದ್ಧಿಗೊಳ್ಳಬೇಕು. ಯುವಜನರಿಗೆ ಮೌಲ್ಯಯುತ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡಬೇಕು. ಯಾವ ಕಾರಣಕ್ಕೂ ಪರಸ್ಪರ ಅಪನಂಬಿಕೆಯ ವಾತಾವರಣ ಸೃಷ್ಟಿಸಬಾರದು ಎಂದು ಡಾ. ಎನ್. ವಿನಯ ಹೆಗ್ಡೆ ಹೇಳಿದರು.

ಸನ್ಮಾನಕ್ಕೆ ಉತ್ತರಿಸಿದ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ‘ಇಂದು ನನ್ನ ಬದುಕಿನ ಸುದಿನ. ಈ ಪೌರ ಸನ್ಮಾನವನ್ನು ನಾನು ಅತ್ಯಂತ ಸಂತೋಷದಿಂದ ಸ್ವೀಕರಿಸಿರುವೆ. ಗುಲ್ಬರ್ಗ ವಿವಿಯು ನನಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಕೂಡ ಅವಿಸ್ಮರಣೀಯವಾಗಿದೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ನನಗೆ ಈ ಪದವಿ, ಈ ಸನ್ಮಾನ ಸ್ಫೂರ್ತಿಯಾಗಿದೆ. ನನ್ನ ತಂದೆಯ ಪರೋಪಕಾರಿ ಗುಣವನ್ನು ಬದುಕಿನಲ್ಲಿ ಅಳವಡಿಸಲು ಇದು ಪ್ರೇರಣೆಯಾಗಿದೆ ಎಂದರು.

ಶಾಸಕ ಯು.ಟಿ. ಖಾದರ್, ಮಂಗಳೂರು ವಿವಿ ಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಶುಭ ಹಾರೈಸಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪೌರ ಸನ್ಮಾನ ಸಮಿತಿಯ ಪ್ರಧಾನ ಸಂಚಾಲಕ ಐವನ್ ಡಿಸೋಜ ಸ್ವಾಗತಿಸಿದರು. 

ಯೆನೆಪೊಯ ವಿವಿ ಕುಲಪತಿ ಡಾ.ವಿಜಯ ಕುಮಾರ್, ಪೌರ ಸನ್ಮಾನ ಸಮಿತಿಯ ಪದಾಧಿಕಾರಿಗಳಾದ ಡಾ. ಯು.ಟಿ.ಇಫ್ತಿಕಾರ್ ಅಲಿ, ಡಾ. ದೇವರಾಜ್ ಕೆ., ಪ್ರದೀಪ ಕುಮಾರ ಕಲ್ಕೂರ, ಜೆ. ನಾಗೇಂದ್ರ ಕುಮಾರ್, ಮಾರ್ಸೆಲ್ ಮೊಂತೆರೊ, ಎನ್.ಜೆ. ನಾಗೇಶ್, ಡಾ. ತಾರನಾಥ, ಡಾ. ಕೆ. ಜನಾರ್ದನ, ಲೀಲಾಕ್ಷ ಕರ್ಕೇರಾ, ವಿಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News