ರಶ್ಯ ವಿರುದ್ಧದ ನಿರ್ಬಂಧ ಕ್ರಮಗಳು ಮನುಕುಲಕ್ಕೆ ಗಂಡಾಂತರ ಆಗಬಹುದು: ರಶ್ಯ ಮಾಜಿ ಅಧ್ಯಕ್ಷರ ಎಚ್ಚರಿಕೆ‌

Update: 2022-07-07 16:47 GMT

ಕೀವ್, ಜು.7: ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯದಂತಹ ಪರಮಾಣು ಶಕ್ತ ದೇಶವನ್ನು ಶಿಕ್ಷಿಸುವ ಪಾಶ್ಚಿಮಾತ್ಯರ ಪ್ರಯತ್ನಗಳು ಮಾನವ ಕುಲವನ್ನು ಅಪಾಯಕ್ಕೆ ದೂಡುವ ಗಂಡಾಂತರಕ್ಕೆ ಕಾರಣವಾಗಬಹುದು ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಹೇಳಿದ್ದಾರೆ. 


ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯ ನಡೆಸಿದ ಆಕ್ರಮಣವು ರಶ್ಯ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಬಂಧದಲ್ಲಿ 19626 ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಬಳಿಕದ ಅತ್ಯಂತ ಗಂಭೀರ ಬಿಕ್ಕಟ್ಟಿಗೆ ಕಾರಣವಾಗಿದ್ದು ಇದು ಜಗತ್ತನ್ನು ಪರಮಾಣು ಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. 

ಅತ್ಯಂತ ದೊಡ್ಡ ಪರಮಾಣು ಸಾಮರ್ಥ್ಯ ಹೊಂದಿರುವ ದೇಶವನ್ನು ಶಿಕ್ಷಿಸುವ ಪರಿಕಲ್ಪನೆ ಅಸಂಬದ್ಧವಾಗಿದೆ. ಮತ್ತು ಇದು ಮನುಕುಲವನ್ನು ಗಂಡಾಂತರಕ್ಕೆ ತಳ್ಳುವ ಅಪಾಯವನ್ನು ತೆರೆದಿಟ್ಟಿದೆ ಎಂದು ಮೆಡ್ವೆಡೇವ್ ಹೇಳಿದ್ದಾರೆ. ಅವರು ಈಗ ರಶ್ಯದ ಭದ್ರತಾ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಅಮೆರಿಕವು ಪ್ರಪಂಚಾದ್ಯಂತ ರಕ್ತವನ್ನು ಚೆಲ್ಲಿದ ಸಾಮ್ರಾಜ್ಯವಾಗಿದೆ. 

ಇದಕ್ಕೆ ಸ್ಥಳೀಯ ಅಮೆರಿಕನ್ನರ ಹತ್ಯೆ, ಜಪಾನ್ನ ಮೇಲೆ ಪರಮಾಣು ದಾಳಿ, ವಿಯೆಟ್ನಾಮ್ನಿಂದ ಅಫ್ಘಾನಿಸ್ತಾನದವರೆಗೆ ಹಲವು ಯುದ್ಧಗಳು ಉತ್ತಮ ನಿದರ್ಶನಗಳಾಗಿವೆ. 
ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಕಾರ್ಯಾಚರಣೆಯನ್ನು ತನಿಖೆ ನಡೆಸಲು ನ್ಯಾಯಾಲಯ ಅಥವಾ ನ್ಯಾಯಮಂಡಳಿಗಳನ್ನು ಬಳಸುವ ಪ್ರಯತ್ನ ನಿರರ್ಥಕ ಮತ್ತು ಜಾಗತಿಕ ವಿನಾಶಕಾರಿ ಎಂದವರು ಹೇಳಿದ್ದಾರೆ. 

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಯುದ್ಧಾಪರಾಧಿಯಾಗಿದ್ದು ಉಕ್ರೇನ್ಗೆ ಪಾಶ್ಚಿಮಾತ್ಯರ ಶಸ್ತ್ರಾಸ್ತ್ರ ಪೂರೈಕೆ ಹಾಗೂ ರಶ್ಯದ ವಿರುದ್ಧದ ಕಠಿಣ ನಿರ್ಬಂಧ ಜಾರಿಗೆ ಅವರೇ ಸಂಪೂರ್ಣ ಹೊಣೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಹೇಳಿದ್ದರು. ರಶ್ಯವು ಸಾಮ್ರಾಜ್ಯಶಾಹಿ ಶೈಲಿಯ ಭೂಸ್ವಾಧೀನಕ್ಕೆ ಮುಂದಾಗಿದ್ದು ಇದು ಎರಡನೆಯ ಮಹಾಯುದ್ಧದ ನಂತರ ಯುರೋಪ್ನಲ್ಲಿ ಬಹುದೊಡ್ಡ ಸಂಘರ್ಷವನ್ನು ಹುಟ್ಟುಹಾಕಿದೆ ಎಂದು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ಹೇಳಿವೆ. 

ಉಕ್ರೇನ್ ಅನ್ನು ನೇಟೊ ಒಕ್ಕೂಟಕ್ಕೆ ಸೇರಿಸುವ ಪ್ರಯತ್ನಗಳು ತನ್ನ ಭದ್ರತೆಗೆ ಅಪಾಯಕಾರಿಯಾಗಿದೆ. ಅಲ್ಲದೆ ಉಕ್ರೇನ್ನಲ್ಲಿರುವ ರಶ್ಯ ಭಾಷಿಕರ ವಿರುದ್ಧ ದೌರ್ಜನ್ಯ ನಡೆಯುತ್ತಿದ್ದು ಉಕ್ರೇನ್ ಅನ್ನು ನಿರಸ್ತ್ರೀಕರಣಗೊಳಿಸಲು ತಾನು ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ರಶ್ಯ ಪ್ರತಿಪಾದಿಸುತ್ತಿದೆ. ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಸುಮಾರು 90%ದಷ್ಟು ಶಸ್ತ್ರಾಸ್ತ್ರ ರಶ್ಯ ಮತ್ತು ಅಮೆರಿಕದ ಬಳಿಯಿದೆ. ಎರಡೂ ದೇಶಗಳ ಸೇನೆಯ ಬತ್ತಳಿಕೆಯಲ್ಲಿ ಸುಮಾರು 4,000 ಪರಮಾಣು ಅಸ್ತ್ರಗಳ ಸಂಗ್ರಹವಿದೆ ಎಂದು ಅಮೆರಿಕ ವಿಜ್ಞಾನಿಗಳ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News