ʼಪತ್ರಕರ್ತ ಝುಬೈರ್‌ ಬಂಧನ ದೇಶದ ಆಂತರಿಕ ವಿಷಯʼ: ಜರ್ಮನ್‌ ವಕ್ತಾರರ ಹೇಳಿಕೆಗೆ ಭಾರತ ಆಕ್ಷೇಪ

Update: 2022-07-07 18:35 GMT
Photo: External Affairs Ministry spokesperson Arindam Bagchi | Twitter
 

ಹೊಸದಿಲ್ಲಿ: ಪತ್ರಕರ್ತ, ಸತ್ಯಶೋಧಕ ಮಹಮ್ಮದ್ ಝುಬೈರ್ ಬಂಧನದ ಕುರಿತು ಜರ್ಮನ್ ವಿದೇಶಾಂಗ ಸಚಿವಾಲಯ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಭಾರತ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಇದು ನಮ್ಮ "ಆಂತರಿಕ ಸಮಸ್ಯೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದು,  ನ್ಯಾಯಾಲಯದ ಮುಂದಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ

"ಇದು ನಮ್ಮ ಆಂತರಿಕ ವಿಷಯ. ವಿಷಯವು ನ್ಯಾಯಾಲಯದ ಮುಂದಿದೆ. ನಮ್ಮ ಕಾನೂನು ವ್ಯವಸ್ಥೆಯು ಸ್ವತಂತ್ರವಾಗಿದೆ. ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆಯು ಸಹಾಯಕಾರಿಯಲ್ಲ. ಇದು ಸರಿಯಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಮಹಮ್ಮದ್ ಝುಬೈರ್ ಬಂಧನದ ಬಗ್ಗೆ ಜರ್ಮನ್ ವಿದೇಶಾಂಗ ಸಚಿವಾಲಯವು ಕಟುವಾಗಿ ಪ್ರತಿಕ್ರಿಯಿಸಿತ್ತು.

"ಸ್ವತಂತ್ರ ವರದಿಗಾರಿಕೆಯು ಯಾವುದೇ ಸಮಾಜಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಅದರ ಮೇಲಿನ ನಿರ್ಬಂಧಗಳು ಕಳವಳಕ್ಕೆ ಕಾರಣವಾಗಿವೆ. ಪತ್ರಕರ್ತರು ಮಾತುಗಳಿಗಾಗಿ ಮತ್ತು ಅವರು ಬರೆಯುವುದಕ್ಕಾಗಿ ಕಿರುಕುಳ ಮತ್ತು ಜೈಲು ಶಿಕ್ಷೆಗೆ ಒಳಗಾಗಬಾರದು. ಈ ನಿರ್ದಿಷ್ಟ ಪ್ರಕರಣದ ಬಗ್ಗೆ ನಮಗೆ ತಿಳಿದಿದೆ ಮತ್ತು ಹೊಸದಿಲ್ಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. " ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರು.

"ಭಾರತವು ತನ್ನನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಬಣ್ಣಿಸುತ್ತದೆ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಲ್ಲಿ ಅಗತ್ಯ ಸ್ಥಳವನ್ನು ನೀಡಲಾಗುತ್ತದೆ ಎಂದು ನಿರೀಕ್ಷಿಸಬಹುದು" ಎಂದು ಜರ್ಮನ್ ವಕ್ತಾರರು ಕುಟುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News