ಜಾರ್ಜ್ ಫ್ಲಾಯ್ಡ್ ಪ್ರಕರಣ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗೆ 21 ವರ್ಷ ಜೈಲು

Update: 2022-07-08 14:38 GMT
Photo: Twitter

ವಾಷಿಂಗ್ಟನ್, ಜು.8: ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಫ್ಲಾಯ್ಡ್ ಅವರ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಿನಿಯಾಪೋಲಿಸ್ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚಾವಿನ್ಗೆ ಅಮೆರಿಕದ ಫೆಡರಲ್ ನ್ಯಾಯಾಲಯ 21 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ‌

2020ರಲ್ಲಿ ನಡೆದ ಘಟನೆಯಲ್ಲಿ, ಪೊಲೀಸ್ ಅಧಿಕಾರಿಯಾಗಿದ್ದ ಚಾವಿನ್, ಜಾರ್ಜ್ ಫ್ಲಾಯ್ಡ್ ನನ್ನು ನೆಲಕ್ಕೆ ಕೆಡವಿ ಆತನ ಕುತ್ತಿಗೆಯನ್ನು ತನ್ನ ಮೊಣಕಾಲಿನಿಂದ 9 ನಿಮಿಷ ಒತ್ತಿ ಹಿಡಿದಿದ್ದರಿಂದ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟಿದ್ದ. ಈ ಪ್ರಕರಣವನ್ನು ಖಂಡಿಸಿ ದೇಶದೆಲ್ಲೆಡೆ ಭಾರೀ ಪ್ರತಿಭಟನೆ ನಡೆದಿತ್ತು. ಗುರುವಾರ ತೀರ್ಪು ಪ್ರಕಟಿಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಪಾಲ್ ಮ್ಯಾಗ್ನಸನ್, ಆ ಸಂದರ್ಭ ಚಾವಿನ್ ವರ್ತನೆ ಅತ್ಯಂತ ಆಕ್ರಮಣಕಾರಿಯಾಗಿತ್ತು ಎಂದಿದ್ದಾರೆ. ನೀವು ಯಾಕೆ ಹಾಗೆ ಮಾಡಿದಿರಿ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ಆದರೆ ವ್ಯಕ್ತಿಯ ಕುತ್ತಿಗೆಯನ್ನು ಮೊಣಕಾಲಿನಿಂದ ಆತನ ಉಸಿರು ನಿಲ್ಲುವವರೆಗೂ ಒತ್ತಿಹಿಡಿದಿರುವುದು ಖಂಡಿತಾ ತಪ್ಪು ಕೆಲಸ. ನಿಮ್ಮ ವರ್ತನೆಯೂ ಆಕ್ರಮಣಕಾರಿಯಾಗಿತ್ತು ಎಂದು ನ್ಯಾಯಾಧೀಶರು ಹೇಳಿದ್ದಾರೆ. 

ನ್ಯಾಯಾಧೀಶರು ತೀರ್ಪು ಪ್ರಕಟಿಸಿದಾಗ ಜಾರ್ಜ್ ಫ್ಲಾಯ್ಡ್ ನ ಕುಟುಂಬದವರಲ್ಲಿ ಚಾವಿನ್ ನೇರವಾಗಿ ಕ್ಷಮೆ ಯಾಚಿಸಲಿಲ್ಲ ಅಥವಾ ಅವರ ಮುಖದಲ್ಲಿ ಪಶ್ಚಾತ್ತಾಪದ ಭಾವನೆ ಇರಲಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ ಚಾವಿನ್ಗೆ 22.5 ವರ್ಷದ ಜೈಲುಶಿಕ್ಷೆಯಾಗಿತ್ತು. ಫೆಡರಲ್ ಬಂಧನ ಕೇಂದ್ರದಲ್ಲಿ ಅವರು ಏಕಕಾಲದಲ್ಲಿ ಎರಡೂ ಶಿಕ್ಷೆಗಳನ್ನು ಪೂರೈಸಲಿದ್ದಾರೆ. ಫ್ಲಾಯ್ಡ್ ಅವರ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಮಿನಿಯಾಪೋಲಿಸ್ ನಗರದ ಇತರ ಮೂವರು ಮಾಜಿ ಪೊಲೀಸ್ ಅಧಿಕಾರಿಗಳೂ ದೋಷಿಗಳೆಂದು ಘೋಷಿಸಲ್ಪಟ್ಟಿದ್ದು ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಘೋಷಿಸಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News