8ನೇ ಬಾರಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್

Update: 2022-07-09 02:29 GMT

ಲಂಡನ್ : ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಅವರು ಎಂಟನೇ ಬಾರಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

ಬ್ರಿಟನ್‍ನ ಕೆಮರೂನ್ ನೊರಿ ವಿರುದ್ಧ ಮೊದಲ ಸೆಟ್‍ನ ಆಘಾತದಿಂದ ಚೇತರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿ ಫೈನಲ್‍ನಲ್ಲಿ ನಿಕ್ ಕಿರ್ಗೋಸ್ ಅವರನ್ನು ಎದುರಿಸಲು ಅರ್ಹತೆ ಪಡೆದರು.

ಶುಕ್ರವಾರ ಸೆಂಟರ್‌ ಕೋರ್ಟ್‍ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸೆಟ್ ಅನ್ನು 2-6 ರಿಂದ ಕಳೆದುಕೊಂಡ ಜೊಕೊವಿಕ್ ಬಳಿಕ ಆಟದ ಲಯ ಕಂಡುಕೊಂಡು 6-3, 6-2, 6-4 ಅಂತರದಿಂದ ಪಂದ್ಯ ಗೆದ್ದರು. ಒಂಬತ್ತನೇ ಶ್ರೇಯಾಂಕದ ನೊರಿ ನಂತರ ಯಾವುದೇ ಹಂತದಲ್ಲಿ 20 ಗ್ರ್ಯಾಂಡ್‍ಸ್ಲಾಂಗಳ ಒಡೆಯನಿಗೆ ಸವಾಲಾಗಲಿಲ್ಲ.

ಈ ಗೆಲುವಿನೊಂದಿಗೆ ಜೊಕೊವಿಕ್ ಅತಿಹೆಚ್ಚು ಗ್ರ್ಯಾಂಡ್‍ಸ್ಲಾಂ ಫೈನಲ್ (32) ತಲುಪಿದ ದಾಖಲೆಗೆ ಪಾತ್ರರಾದರು. ರೋಜರ್ ಫೆಡರರ್ 31 ಹಾಗೂ ರಫೇಲ್ ನಡಾಲ್ 30 ಬಾರಿ ಫೈನಲ್ ತಲುಪಿದ್ದಾರೆ.

ಜೊಕೊವಿಕ್ ಸತತ ನಾಲ್ಕನೇ ವಿಂಬಲ್ಡನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇಲ್ಲಿ ಗೆದ್ದರೆ ದಾಖಲೆ ಏಳು ಬಾರಿ ವಿಂಬಲ್ಡನ್ ಕಿರೀಟ ಧರಿಸಿದಂತಾಗುತ್ತದೆ. ಎರಡನೇ ಸೆಟ್‍ನ ಎಂಟನೇ ಗೇಮ್‍ನಲ್ಲಿ ನೊರಿ ಅವರ ಸರ್ವ್ ಮುರಿದ ಸೆರ್ಬಿಯನ್ ಆಟಗಾರ ಆ ಬಳಿಕ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News