ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕಿದ ರವೀಂದ್ರ ಜಡೇಜ, ಭಿನ್ನಾಭಿಪ್ರಾಯದ ವದಂತಿ
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ನಾಯಕ ರವೀಂದ್ರ ಜಡೇಜ ಅವರು ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಿಂದ ತಂಡದ 2021 ಹಾಗೂ 2022 ರ ಋತುಗಳಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದಾರೆ. ಇದು ಆಲ್‌ರೌಂಡರ್ ಹಾಗೂ ಐಪಿಎಲ್ ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ.
ಐಪಿಎಲ್ 2022 ರ ಸೀಸನ್‌ಗೆ ಮುಂಚಿತವಾಗಿ ಎಂ.ಎಸ್. ಧೋನಿ ಚೆನ್ನೈ ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಜಡೇಜ ಅವರನ್ನು ಈ ವರ್ಷದ ಆರಂಭದಲ್ಲಿ ಸಿಎಸ್‌ಕೆ ನಾಯಕರನ್ನಾಗಿ ನೇಮಿಸಲಾಯಿತು. ಆದಾಗ್ಯೂ, ನಾಯಕತ್ವವು ಅವರ ವೈಯಕ್ತಿಕ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತಿದ್ದಂತೆ ಆಲ್ ರೌಂಡರ್ 2022 ರ ಐಪಿಎಲ್ ಮಧ್ಯೆದಲ್ಲೇ ನಾಯಕತ್ವದಿಂದ ಕೆಳಗಿಳಿದರು.
ಧೋನಿ ತಂಡದ ಜವಾಬ್ದಾರಿಯನ್ನು ಮರಳಿ ಪಡೆದರು. ನಂತರ ಜಡೇಜ ಪಕ್ಕೆಲುಬಿನ ಗಾಯದಿಂದ ಐಪಿಎಲ್ ನಿಂದ ಹೊರಗುಳಿದಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಆಲ್ ರೌಂಡರ್ ಚೆನ್ನೈ ಫ್ರಾಂಚೈಸಿಯೊಂದಿಗೆ ಮರೆಯಲಾಗದ ಐಪಿಎಲ್ ಋತುವನ್ನು ಕೊನೆಗೊಳಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಜಡೇಜ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಐಪಿಎಲ್ 2021 ಹಾಗೂ 2022 ರ ಸಿಎಸ್‌ಕೆ ಅಭಿಯಾನಗಳಿಗೆ ಲಿಂಕ್ ಮಾಡಿದ ಚಿತ್ರಗಳನ್ನು ತೆಗೆದುಹಾಕಿರುವುದನ್ನು ಅಭಿಮಾನಿಗಳು ತಕ್ಷಣವೇ ಗಮನಿಸಿದ್ದಾರೆ.
"ಜಡೇಜ ಈ ವರ್ಷ ಧೋನಿ ಅವರ ಜನ್ಮದಿನದಂದು ಶುಭ ಹಾರೈಸಲಿಲ್ಲ. (ಅವರು ಪ್ರತಿ ವರ್ಷ ಶುಭಾಶಯ ಕೋರುತ್ತಾರೆ) ಜಡೇಜ ತಮ್ಮ ಎಲ್ಲಾ ಸಿಎಸ್‌ಕೆ ಸಂಬಂಧಿತ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಳಿಸಿದ್ದಾರೆ. ಖಂಡಿತವಾಗಿಯೂ ಏನೋ ಸರಿಯಿಲ್ಲ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
“ರವೀಂದ್ರ ಜಡೇಜ ಬಹುಶಃ 2023 ರ ಸೀಸನ್‌ಗೆ ಸಿಎಸ್‌ಕೆ ತೊರೆಯಲಿದ್ದಾರೆ. ಸಿಎಸ್ ಕೆ ಗೆ ಸಂಬಂಧಿಸಿದ ಪ್ರತಿಯೊಂದು ಪೋಸ್ಟ್ ಅನ್ನು ಅಳಿಸಲಾಗಿದೆ. ದೀಪಕ್ ಚಹಾರ್ ಹಾಗೂ ಅಂಬಟಿ ರಾಯುಡು ಬಗ್ಗೆಯೂ ಕೇಳಿದ್ದೇವೆ. ಆದರೆ ಈ ಇಬ್ಬರ ಬಗ್ಗೆ ದೃಢೀಕರಿಸಲಾಗಿಲ್ಲ. ಸಿಎಸ್ಕೆ ಅಭಿಮಾನಿಗಳಿಗೆ ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ " ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
2022 ರ ಐಪಿಎಲ್ ನಲ್ಲಿ ಜಡೇಜ ಕಳಪೆ ಪ್ರದರ್ಶನ ನೀಡಿದ್ದರೂ ಇಂಗ್ಲೆಂಡ್ ವಿರುದ್ಧದ ತನ್ನ ಪುನರಾಗಮನದ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಆಡಿದ್ದರು.ಜುಲೈ 1 ಮತ್ತು ಜುಲೈ 5 ರ ನಡುವೆ ನಡೆದ ಇಂಗ್ಲೆಂಡ್ ವಿರುದ್ಧದ ಮರುನಿಗದಿಪಡಿಸಲಾಗಿರುವ ಐದನೇ ಟೆಸ್ಟ್‌ನಲ್ಲಿ ಅವರು ಎಜ್ ಬಾಸ್ಟನ್‌ನಲ್ಲಿ ಶತಕವನ್ನು ಸಿಡಿಸಿದ್ದರು.