ಕಾಲೇಜು ಪ್ರವೇಶಾತಿಗೆ ಸಿಬಿಎಸ್‌ಇ ಪರೀಕ್ಷಾ ಫಲಿತಾಂಶಕ್ಕೆ ಕಾಯುವಂತೆ ಯುಜಿಸಿಗೆ ಮಂಡಳಿ ಮನವಿ

Update: 2022-07-09 16:58 GMT

ಹೊಸದಿಲ್ಲಿ, ಜು.9: ಸಿಬಿಎಸ್‌ಇ ಹನ್ನೆರಡನೆ ತರಗತಿಯ  ಫಲಿತಾಂಶ ಪ್ರಕಟಣೆಗೆ ಕಾಯದೆ, ಕಾಲೇಜುಗಳಲ್ಲಿ  ಪದವಿ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆಗೆ ಅನುಮತಿ ನೀಡಿರುವ ವಿಶ್ವವಿದ್ಯಾನಿಲಯಗಳ  ಬಗ್ಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶನಿವಾರ  ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಕ್ಕೆ ದೂರು ನೀಡಿದೆ.

ಸಿಬಿಎಸ್‌ಇ ಫಲಿತಾಂಶ ಘೋಷಣೆಯ ದಿನಾಂಕವನ್ನು  ಗಮನದಲ್ಲಿರಿಸಿಕೊಂಡು  ತಮ್ಮ ದಾಖಲಾತಿ ಕಾಲೆಂಡರ್ ರೂಪಿಸುವಂತೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಕ್ಕೆ ಸಿಬಿಎಸ್‌ಇ  ಮನವಿ ಮಾಡಿದೆ. ಕೆಲವು ಮೂಲಗಳ ಪ್ರಕಾರ,  ಮುಂದಿನ ವಾರ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ಈ ಬಗ್ಗೆ ಸೂಚನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಭಾರತದಲ್ಲಿನ ಕೆಲವು ವಿಶ್ವವಿದ್ಯಾನಿಲಯಗಳು ಅದರಲ್ಲೂ ಮಹಾರಾಷ್ಟ್ರದಲ್ಲಿನವು  2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಶಿಕ್ಷಣ ಕೋರ್ಸ್‌ಗಳ ನೋಂದಣಿಯನ್ನು  ಆರಂಭಿಸಿವೆ. ಆದುದರಿಂದ ಎಲ್ಲಾ ವಿಶ್ವವಿದ್ಯಾನಿಲಯಗಳು ತಮ್ಮ ಪದವಿ ಶಿಕ್ಷಣದ ದಾಖಲಾತಿಯನ್ನು  ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದ ಘೋಷಣೆಯ ದಿನಾಂಕವನ್ನು  ಮನದಲ್ಲಿರಿಸಿ, ರೂಪಿಸಬೇಕೆಂದು  ಸಿಬಿಎಸ್‌ಇ ಮಂಡಳಿ ತಿಳಿಸಿದೆ.

ಐಎಸ್‌ಸಿ  (ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್),  ಸಿಐಎಸ್‌ಇ  (ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮ್) ಹಾಗೂ ಸಿಬಿಎಸ್ 12ನೇ ತರಗತಿ ಫಲಿತಾಂಶಗಳ ಪ್ರಕಟಣೆಗೆ ಕಾಯದೆ ಪದವಿ ಕಾಲೇಜುಗಳಲ್ಲಿ ಪದವಿ ಶಿಕ್ಷಣ ತರಗತಿಗಳಿಗೆ ಪ್ರವೇಶಾತಿಯನ್ನು  ಮುಂಬೈ ವಿಶ್ವವಿದ್ಯಾನಿಲಯ ಆರಂಬಿಸಿರುವ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಈ ಪತ್ರವನ್ನು ಬರೆದಿದೆ.
ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟವಾಗದೆ ಇರುವುದರಿಂದ,  ಸಿಬಿಎಸ್‌ಇ ಹಾಗೂ ಸಿಐಎಸ್‌ಸಿಇ ಅನ್ವಯಿತ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ತಾವು ಇಛ್ಛಿಸಿದ ಕಾಲೇಜುಗಳಲ್ಲಿ ತಾವು ಬಯಸಿರುವ ಕೋರ್ಸ್‌ಗಳಿಗೆ ಸೀಟುಗಳು ದೊರೆಯಲಾರದೆಂಬ ಆತಂಕವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News