×
Ad

ಜಗನ್ ಮೋಹನ್ ರೆಡ್ಡಿ ಸಂಪೂರ್ಣ ಜೀವಿತಾವಧಿಗೆ ವೈಎಸ್‍ಆರ್ ಕಾಂಗ್ರೆಸ್ ಅಧ್ಯಕ್ಷ!

Update: 2022-07-10 07:41 IST
Photo:twitter

ಹೈದರಾಬಾದ್: ವೈ.ಎಸ್.ಜಗನ್ ಮೋಹನ್ ರೆಡ್ಡಿಯವರನ್ನು ಅವರ ಜೀವಿತಾವಧಿಯುದ್ದಕ್ಕೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ (ವೈಎಸ್‍ಆರ್ ಸಿ) ಪಕ್ಷದ ಅಧ್ಯಕ್ಷರಾಗಿ ಶನಿವಾರ ಆಯ್ಕೆ ಮಾಡಲಾಗಿದೆ.

ಆಡಳಿತಾರೂಢ ಪಕ್ಷದ ಎರಡು ದಿನಗಳ ಅಧಿವೇಶನದ ಕೊನೆಯ ದಿನ ಈ ಸಂಬಂಧ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ಅನುವಾಗುವಂತೆ ಪಕ್ಷದ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್ ಮೋಹನ್ ರೆಡ್ಡಿಯವರು 2011ರಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ವೈಎಸ್‍ ಆರ್ ಸಿ ಸ್ಥಾಪಿಸಿದ್ದರು. ಅಲ್ಲಿಂದ ಇದುವರೆಗೂ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದು, ಅವರ ತಾಯಿ ವಿಜಯಮ್ಮ ಪಕ್ಷದ ಗೌರವಾಧ್ಯಕ್ಷರಾಗಿದ್ದಾರೆ.

2017ರ ಅಧಿವೇಶನದಲ್ಲಿ ಜಗನ್ ಅವರನ್ನು ವೈಎಸ್‍ಆರ್ ಸಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.

ವೈಎಸ್‍ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥರಾಗಿರುವ ತಮ್ಮ ಮಗಳು ಶರ್ಮಿಳಾ ಅವರಿಗೆ ಸ್ಥಾನ ತೆರವುಗೊಳಿಸುವ ನಿರ್ಧಾರವನ್ನು ವಿಜಯಮ್ಮ ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

"ಪಕ್ಷದ ಹುದ್ದೆಯಿಂದ ಹಿಂದೆ ಸರಿಯಲು ನಾನು ನಿರ್ಧರಿಸಿದ್ದೇನೆ. ಶರ್ಮಿಳಾ ಏಕಾಂಗಿ ಹೋರಾಟ ನಡೆಸುತ್ತಿದ್ದಾಳೆ. ರಾಜಶೇಖರ ರೆಡ್ಡಿಯವರ ಪತ್ನಿಯಾಗಿ, ಶರ್ಮಿಳಾಳ ತಾಯಿಯಾಗಿ ನಾನು ಆಕೆಯ ಜತೆ ನಿಲ್ಲಬೇಕು ಎಂದು ನನ್ನ ಅಂತರಾಳ ಹೇಳುತ್ತಿದೆ" ಎಂದು ಶುಕ್ರವಾರ ರಾಷ್ಟ್ರೀಯ ಅಧಿವೇಶನದಲ್ಲಿ ವಿಜಯಮ್ಮ ಹೇಳಿದ್ದರು. 2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಜಗನ್ ಜೀವಿತಾವಧಿಯುದ್ದಕ್ಕೂ ಪಕ್ಷದ ಅಧ್ಯಕ್ಷರಾಗಲು ಈ ಸಂಬಂಧದ ನಿರ್ಣಯಕ್ಕೆ ವೈಎಸ್‍ ಆರ್ ಸಿ, ಭಾರತದ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News