ಅಸ್ಸಾಂ: ಬೆಲೆ ಏರಿಕೆ ವಿರುದ್ಧ ಬೀದಿ ನಾಟಕದಲ್ಲಿ ಶಿವನ ವೇಷ ಧರಿಸಿದ ವ್ಯಕ್ತಿಯ ಬಂಧನ

Update: 2022-07-10 08:52 GMT
Photo:PTI

ಗುವಾಹಟಿ: ಶಿವನ ವೇಷ ಧರಿಸಿ ಬೆಲೆ ಏರಿಕೆ ವಿರುದ್ಧ ಬೀದಿ ನಾಟಕವಾಡುತ್ತಿದ್ದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅಸ್ಸಾಂನಲ್ಲಿ ರವಿವಾರ ಬಂಧಿಸಲಾಗಿದೆ.

ನರೇಂದ್ರ ಮೋದಿ ಸರಕಾರದ ಅಡಿಯಲ್ಲಿ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ಬಿರಿಂಚಿ ಬೋರಾ ನಿನ್ನೆ ಮಹಿಳಾ ಸಹ-ನಟಿ (ಪಾರ್ವತಿಯ ವೇಷ ಧರಿಸಿದ) ಜೊತೆ ಸ್ಕಿಟ್ ಅನ್ನು ಪ್ರದರ್ಶಿಸುವಾಗ ಭಗವಾನ್ ಶಿವನ ವೇಷವನ್ನು ಧರಿಸಿದ್ದರು. ಬೋರಾ ಅವರ ನಟನೆಯ  ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.

ಆದಾಗ್ಯೂ, ಬೋರಾ ಅವರ ನಡೆಯನ್ನು  ಸಂಘಪರಿವಾರ  ಟೀಕಿಸಿದ್ದವು.  ಬೋರಾ  ವಿರುದ್ಧ ಪ್ರತಿಭಟನೆಗಳನ್ನು ನಡೆಸಿದವು ಹಾಗೂ  ನಂತರ ನಟನು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

ದೂರಿನ ನಂತರ, ಬಿರಿಂಚಿ ಬೋರಾನನ್ನು ಬಂಧಿಸಿ ನಾಗಾನ್ ಸದರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಬೀದಿ ನಾಟಕದಲ್ಲಿ, ಬಿರಿಂಚಿ ಬೋರಾ ಹಾಗೂ  ಅವರ ಸಹ-ನಟ ಪರಿಶಿಮಿತಾ, ಶಿವ ಹಾಗೂ  ಪಾರ್ವತಿಯ ವೇಷವನ್ನು ಧರಿಸಿ, ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಾರೆ. ಬೀದಿ ನಾಟಕಕ್ಕಾಗಿ ಗೊತ್ತುಪಡಿಸಿದ ಸ್ಥಳದಲ್ಲಿ, ವಾಹನವು ಇಂಧನ ಖಾಲಿಯಾದ ಕಾರಣ ನಿಲ್ಲುತ್ತದೆ. ಈ ವಿಷಯದ ಕುರಿತು ಶಿವ ಹಾಗೂ  ಪಾರ್ವತಿ ವೇಷಧಾರಿಗಳು  ವಾಗ್ವಾದ ನಡೆಸುತ್ತಾರೆ.  ಆಗ  'ಶಿವ' ವೇಷಧಾರಿ ಏರುತ್ತಿರುವ ಇಂಧನ ಬೆಲೆಗಳು ಹಾಗೂ  ಇತರ ವಿಷಯಗಳ ಬಗ್ಗೆ ಮೋದಿ ಸರಕಾರದ ಮೇಲೆ ದಾಳಿ ಮಾಡಲು ಆರಂಭಿಸುತ್ತಾನೆ.

ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ನರೇಂದ್ರ ಮೋದಿ ಸರಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕು ಎಂದು ಶಿವ ವೇಶಧಾರಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News