ಬೈಂದೂರು: ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ; ಜಿಲ್ಲಾಧಿಕಾರಿಗಳಿಂದ ಸ್ಥಳಕ್ಕೆ ಭೇಟಿ

Update: 2022-07-10 09:52 GMT

ಕುಂದಾಪುರ: ಐದಾರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನೆರೆ ಸಮಸ್ಯೆಗೆ ತುತ್ತಾಗಿದ್ದ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ ಪ್ರದೇಶದ ಸಂತ್ರಸ್ತ  ಜನರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.

ಈ ಸಂದರ್ಭ  ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಲಾಗಿದೆ. ನೆರೆ ವೇಳೆ ಜಾನುವಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮಾತನಾಡಿ, ಅಧಿಕಾರಿಗಳ ತಂಡ ಶೀಘ್ರವೇ ಬೆಳೆ ಸಮೀಕ್ಷೆ ನಡೆಸಲಿದ್ದು ಅಗತ್ಯ ಪರಿಹಾರ ನೀಡಲಾಗುತ್ತದೆ. ಮನೆ ಹಾನಿಗೆ ಸಂಬಂಧಿಸಿದಂತೆಯೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ದೋಣಿ ಸಹಿತ ಅಗತ್ಯ ಮುಂಜಾಗೃತೆ ವಹಿಸಲು ಸ್ಥಳೀಯರು ಉತ್ತಮವಾಗಿ ಸಹಕರಿಸಿದ್ದಾರೆ ಎಂದರು.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರ ವೈಯಕ್ತಿಕ ಖರ್ಚಿನಲ್ಲಿ ನೂರಕ್ಕೂ ಅಧಿಕ ಕಿಟ್ ವಿತರಣೆ ನಡೆದಿದ್ದು ಜಿಲ್ಲಾಧಿಕಾರಿ ಕೂರ್ಮಾರಾವ್, ಸಿಇಒ ಪ್ರಸನ್ನ ಎಚ್, ಬೈಂದೂರು ತಹಶಿಲ್ದಾರ್ ಕಿರಣ ಗೌರಯ್ಯ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕಂದಾಯ ನಿರೀಕ್ಷಕ ಮಂಜುನಾಥ್, ಉಪತಹಶೀಲ್ದಾರ್ ಭೀಮಪ್ಪ,  ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ರಾಜೇಶ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ಯಾಮಲಾ ಕುಂದರ್ ಹಾಗೂ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳ ತಂಡ ಬ್ರಹ್ಮಾವರ ತಾಲೂಕಿನ ನೆರೆ ಬಾಧಿತ ಉಪ್ಪೂರು ಹಾಗೂ ಇತರ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News