ಎರ್ನಾಕುಲಂ ನಿಂದ ಲಡಾಖ್ ವರೆಗೆ ಸೈಕಲ್ ಸವಾರಿ ಹೊರಟಿರುವ ಯೋಗಪಟು ಅಗ್ರಿಮಾ ನಾಯರ್ ಗೆ ಶಾಸಕ ವೇದವ್ಯಾಸ್ ಕಾಮತ್ ಗೌರವ

Update: 2022-07-10 10:30 GMT

ಮಂಗಳೂರು: ಎರ್ನಾಕುಲಂ ನಿಂದ ಲೇಹ್ ಲಡಾಖ್ ವರೆಗೆ ಸೈಕಲ್ ಸವಾರಿ ಹೊರಟಿರುವ ಯೋಗಪಟು ಅಗ್ರಿಮಾ ನಾಯರ್ ಅವರನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರಿನಲ್ಲಿ ಸ್ವಾಗತಿಸಿದರು.

ಯೋಗ ಥೆರಪಿ ಮತ್ತು ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅಗ್ರಿಮಾ ನಾಯಕ್ ಜೂನ್ 21ರಂದು ಎರ್ನಾಕುಲಂ ವಡುತಲಾ ಚಿನ್ಮಯ ವಿದ್ಯಾಲಯದಿಂದ ಯಾತ್ರೆ ಪ್ರಾರಂಭಿಸಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಕಾಶ್ಮೀರದ ಮೂಲಕ ಲಡಾಖ್ ತಲುಪಲಿದ್ದಾರೆ. ಪ್ರವಾಸದುದ್ದಕ್ಕೂ ಶಾಲೆಗಳಲ್ಲಿ ವಿಧ್ಯಾರ್ಥಿಗಳಿಗೆ ಯೋಗದ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ.

ಈ ವಿಚಾರದ ಕುರಿತು ಮಾತನಾಡಿದ ಶಾಸಕ ಕಾಮತ್, ಭಾರತವು ಜಗತ್ತಿಗೆ ಯೋಗದ ಮೂಲಕ ಆಗುವ ಆರೋಗ್ಯ ಲಾಭವನ್ನು ತಿಳಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಯೋಗ ದಿನದ ಪರಿಕಲ್ಪನೆ ನೀಡಿದ ಮೇಲೆ ಬಹಳಷ್ಟು ಜನರಿಗೆ ಯೋಗದ ಮೇಲೆ ಆಸಕ್ತಿ ಮೂಡಿದೆ. ಎರ್ನಾಕುಳಂ ನಿಂದ ಲೇಹ್ ಲಡಾಖ್ ಗೆ ಸೈಕಲ್ ಸವಾರಿ ಹೊರಟಿರುವ ಅಗ್ರಿಮಾ ನಾಯರ್ ಅವರು ವಾಸ್ತವ್ಯ ಹೂಡುವ ಕಡೆಗಳಲ್ಲಿ ಮಕ್ಕಳಿಗೆ ಯೋಗ ಹೇಳಿಕೊಡುವ ಮೂಲಕ ವಿಶಿಷ್ಟ ಅಭಿಯಾನ ಪ್ರಾರಂಭಿಸಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ ಎಂದು ಶಾಸಕ ಕಾಮತ್ ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಸ್ಥಳೀಯ ಕಾರ್ಪೋರೇಟರ್ ಜಯಲಕ್ಷ್ಮಿ ಶೆಟ್ಟಿ, ದಯಾ ಆರ್ಟ್ಸ್ ಮಾಲಕರಾದ ದಯಾನಂದ್, ಸೂರ್ಯಕಲಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News