ಹೆನ್ನಾಬೈಲ್ : ‘ಈದುಲ್ ಅಝ್‌ಹಾ’ ಆಚರಣೆ

Update: 2022-07-10 11:07 GMT

ಹೆನ್ನಾಬೈಲ್: ಮೊಹಿದ್ದೀನ್ ಜುಮಾ ಮಸೀದಿ ಹೆನ್ನಾಬೈಲ್‌ನಲ್ಲಿ ಸಡಗರ, ಸಂಭ್ರಮದಿಂದ ‘ಈದುಲ್ ಅಝ್‌ಹಾ’ವನ್ನು ಆಚರಿಸಲಾಯಿತು.

ಪ್ರಾರ್ಥನೆಯ ಸಂದರ್ಭ ಮಾತನಾಡಿದ ಧರ್ಮಗುರು ಇಮ್ರಾನ್ ರಝಾ ಅವರು, ಪ್ರಭುತ್ವವು ಇಸ್ಲಾಮನ್ನು ಮತ್ತು ಮುಸ್ಲಿಮ್ ಸಮುದಾಯವನ್ನು ಕಾಡುವುದು ನಿರಂತರ ನಡೆದುಕೊಂಡು ಬಂದಿರುವ ಸಂಗತಿ. ಪೂರ್ವಾಗ್ರಹಪೀಡಿತ ವಾದ ಪ್ರಭುತ್ವದ ಮೇಲಿನ ಅಸಮಾಧಾನಗಳ ಅಭಿವ್ಯಕ್ತಿಯು ಸಂಯಮದಿಂದ ಕೂಡಿ ಪ್ರಬುದ್ಧವಾಗಿರಬೇಕೇ ಹೊರತು ಅನ್ಯಧರ್ಮದವರಿಗೆ ತೊಂದರೆಯಾಗುವ ರೀತಿಯಲ್ಲಿ ಅಥವಾ ಅಪಾರ್ಥ ಕಲ್ಪಿಸುವ ರೀತಿಯಲ್ಲಿ ಇರಬಾರದು.

ಜಗತ್ತಿನ ಬಹುತೇಕ ಎಲ್ಲ ಸಮುದಾಯಗಳು ನಾನಾ ಕಾರಣಗಳಿಂದ ಬಹುತೇಕ ಅಭದ್ರತೆಯಿಂದ ಬಳಲುತ್ತಿವೆ. ವಾಮಮಾರ್ಗದ ಮೂಲಕ ರಾಜಕೀಯವು ಸಮುದಾಯಗಳ ಈ ಅಭದ್ರತೆಯನ್ನೆ ದಾಳವಾಗಿ ಪರಿವರ್ತಿಸಿ ಕೊಂಡು ಪರಸ್ಪರರನ್ನು ಎತ್ತಿಕಟ್ಟಿ ಜಗತ್ತಿನ ಪ್ರಕ್ಷುಬ್ಧತೆಗೆ ಕಾರಣವಾಗಿದೆ. ಹಾಗಾಗಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ವಿಚಲಿತಗೊಂಡಿವೆ. ಇಂತಹ ವಿಷಮ ಕಾಲಘಟ್ಟದಲ್ಲಿ 4000 ವರ್ಷದ ಹಿಂದೆ ಮಕ್ಕಾದಲ್ಲಿ ಮಗನನ್ನು ಬಲಿಕೊಡುವ ದೇವಾದೇಶ ಬಂದಾಗ ತಂದೆ ಪ್ರವಾದಿ ಇಬ್ರಾಹೀಂ ಮತ್ತು ಮಗ ಇಸ್ಮಾಯೀಲ್ ತೋರಿದ ದೃಢತೆ, ಬದ್ಧತೆ ಮತ್ತು ಸಂಯಮ ಮುಸ್ಲಿಮ್ ಸಮುದಾಯಕ್ಕೆ ಮಾದರಿಯಾಗಬೇಕು. ‌

ಶಾಂತಿಯು ಸೌಹಾರ್ದದಿಂದ ಸಾಧ್ಯ ಹೊರತು ಸಂಘರ್ಷದಿಂದಲ್ಲ ಎಂಬ ವಾಸ್ತವವನ್ನು ಸಮುದಾಯಗಳು ಮನಗಾಣಬೇಕಿದೆ. ಹಬ್ಬದ ಸಂದರ್ಭದ ಪ್ರಾಣಿಬಲಿಯೂ ಸೇರಿದಂತೆ ಧರ್ಮದ ಬಹುಮುಖ್ಯ ಆಚರಣೆಗಳ ಬಗ್ಗೆ ಸಹಧರ್ಮದವರಿಗೆ ಅಗತ್ಯ ಅರಿವು ನೀಡುವ ಕೆಲಸವಾಗಬೇಕು. ಅರಿವಿನ ಕೊರತೆಯ ದುರ್ಲಾಭವನ್ನು ಸಮಾಜಘಾತುಕ ಶಕ್ತಿಗಳು ಪಡೆದುಕೊಂಡು ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವುದನ್ನು ನಿರಂತರ ಕಾಣುತ್ತಿದ್ದೇವೆ ಎಂದು  ಇಮ್ರಾನ್ ರಝಾ ಅವರು ಹೇಳಿದರು.

ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಹಸನ್ ಖಾದಿರ್, ಕಾರ್ಯದರ್ಶಿ ರಶೀದ್ ಆಹ್ಮದ್, ಮಾಜಿ ಅಧ್ಯಕ್ಷ ಅಬ್ಬಾಸ್ ಸಾಹೇಬ್, ಮುಷ್ತಾಕ್ ಹೆನ್ನಾಬೈಲ್, ಶಾಹಿದ್ ಅಬ್ಬಾಸ್, ಇಬ್ರಾಹಿಮ್ ಸಾಹೇಬ್, ಅಬ್ದುಲ್ ಹಮೀದ್, ಅಲ್ತಾಫ್ ಅಲಿ, ಸಯ್ಯದ್ ಆಸೀಫ್, ರಫೀಕ್ ಬಾಪು, ಶಬ್ಬೀರ್ ಸಾಹೇಬ್, ಹಯಾತ್ ಭಾಷಾ, ಸುಭಾನ್ ಸಾಗರ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News