ಗೋವಾ ರಾಜಕೀಯ ಬಿಕ್ಕಟ್ಟು: ಬಿಜೆಪಿಯತ್ತ 6 ಕಾಂಗ್ರೆಸ್ ಶಾಸಕರು

Update: 2022-07-11 01:56 GMT
Photo: PTI

ಪಣಜಿ: ಪುಟ್ಟ ರಾಜ್ಯ ಗೋವಾ ಮತ್ತೊಂದು ರಾಜಕೀಯ ವಿಪ್ಲವಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ಪಕ್ಷದ ಹನ್ನೊಂದು ಮಂದಿ ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

40 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರದ ಎರಡನೇ ಅವಧಿ ಆರಂಭವಾಗಿ ಕೇವಲ ನಾಲ್ಕು ತಿಂಗಳಲ್ಲಿ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.

ಭಾನುವಾರ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಕಾಂಗ್ರೆಸ್‍ನಿಂದ ಹೊರಬಂದು ಬಿಜೆಪಿಗೆ ಸೇರಲು ಬಯಸಿರುವ ಮಾಜಿ ಸಿಎಂ ದಿಗಂಬರ ಕಾಮತ್ ಅವರ ನೇತೃತ್ವದ ಗುಂಪು, ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿದೆ. ಇದಕ್ಕೆ ಭಿನ್ನರ ಗುಂಪು ಎಂಟು ಶಾಸಕರನ್ನು ಹೊಂದುವುದು ಅಗತ್ಯ.

ಕಾಮತ್ ಗುಂಪಿಗೆ ಇನ್ನಷ್ಟು ಮಂದಿ ಸೇರುತ್ತಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಬಿಕ್ಕಟ್ಟು ಶಮನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ರಾಜ್ಯಸಭಾ ಸದಸ್ಯ ಮುಕುಲ್ ವಾಸ್ನಿಕ್ ಅವರನ್ನು ಗೋವಾಗೆ ಕಳುಹಿಸಿಕೊಟ್ಟಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ, ಆಯ್ಕೆಯಾದ ಬಳಿಕ ಬಜೆಪಿ ಸೇರುವುದಿಲ್ಲ ಎಂದು ತನ್ನ ಅಭ್ಯರ್ಥಿಗಳಿಂದ ಕಾಂಗ್ರೆಸ್ ಪಕ್ಷದ ಅಫಿಡವಿಟ್ ಪಡೆದಿತ್ತು. ಈ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು, ಕಾಮತ್ ಬಣದ ಮೈಕೆಲ್ ಲೋಬೊ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News