ಬಿಹಾರ: ಅಧಿಕಾರಾರೂಢ ಮೈತ್ರಿಯಲ್ಲಿ ಮತ್ತೆ ಅಸಮಾಧಾನದ ಹೊಗೆ

Update: 2022-07-11 03:18 GMT
photo:pti

ಪಾಟ್ನಾ: ಬಿಹಾರದಲ್ಲಿ ಕಂದಾಯ ಮತ್ತ ಭೂಸುಧಾರಣೆ ಖಾತೆ ಸಚಿವ ರಾಮ್ ಸೂರತ್ ರಾಯ್ ಮಾಡಿದ್ದ 149 ಮಂದಿ ವೃತ್ತ ಅಧಿಕಾರಿಗಳ ವರ್ಗಾವಣೆಯನ್ನು ಮುಖ್ಯಮಂತ್ರಿ ಕಚೇರಿ ತಡೆದಿರುವುದು, ರಾಜ್ಯದಲ್ಲಿ ಅಧಿಕಾರಾರೂಢ ಎನ್‍ಡಿಎ ಕೂಟದ ಪ್ರಮುಖ ಘಟಕ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವೆ ಅಸಮಾಧಾನ ಹೊಗೆಯಾಡಲು ಕಾರಣವಾಗಿದೆ.

ಬಿಜೆಪಿಯ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ತಕ್ಷಣ ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ನಡೆಸಿದ್ದು, ದರ್ಬಾಂಗ್‍ಗೆ ಹೋಗುವ ಮಾರ್ಗಮಧ್ಯದಲ್ಲಿ ಮುಜಾಫರ್‍ಪುರ ಜಿಲ್ಲೆಯ ಬೊಚಾಹ ಜಿಲ್ಲೆಯಲ್ಲಿರುವ ರಾಯ್ ನಿವಾಸಕ್ಕೆ ತೆರಳಿ ಒಂದು ಗಂಟೆ ಕಾಲ ರಹಸ್ಯ ಮತುಕತೆ ನಡೆಸಿದರು.

ಈ ಭೇಟಿಯ ಬಳಿಕ ಬಿಜೆಪಿ ವಕ್ತಾರ ಅರವಿಂದ್ ಸಿಂಗ್ ಮಾಹಿತಿ ನೀಡಿ, ರಾಯ್ ಅವರಿಗೆ ಯಾವುದೇ ಅಸಮಾಧಾನ ಉಂಟಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗುವುದು. ಸಿಎಂ ನಿತೀಶ್ ಕುಮಾರ್ ಸ್ವತಃ ಪರಿಹಾರ ಕಂಡುಹುಡುಕಲಿದ್ದಾರೆ ಎಂದು ಹೇಳಿದರು.

ಬಿಹಾರ ವಿಧಾನಸಭಾ ಕಟ್ಟಡದ ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಜುಲೈ 12ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಬಿಕಟ್ಟು ಶಮನ ಅನಿವಾರ್ಯವಾಗಿದೆ. ಜತೆಗೆ ಜುಲೈ 18ರ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮಿತ್ರ ಪಕ್ಷದ ಜತೆ ಸಂಘರ್ಷ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ.

"ಸಚಿವ ಹುದ್ದೆ ಯಾರ ಅಪ್ಪನ ಆಸ್ತಿಯೂ ಅಲ್ಲ. ನನ್ನ ಭಾವನೆಗಳಿಗೆ ಖಂಡಿತಾ ಧಕ್ಕೆಯಾಗಿದೆ. ಸಚಿವ ಪದವಿ ತ್ಯಜಿಸಲೂ ನಾನು ಹಿಂದೆ ಮುಂದೆ ನೋಡುವುದಿಲ್ಲ" ಎಂದು ಮುಜಾಫರ್‍ಪುರದಲ್ಲಿ ಶನಿವಾರ ರಾಯ್ ಘೋಷಿಸಿದ್ದರು. ಸಚಿವರು ಮಾಡಿದ ವರ್ಗಾವಣೆಗಳು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದ್ದು, ತಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಮತ್ತು ಪಕ್ಷದ ಮಾಧ್ಯಮ ಮುಖ್ಯಸ್ಥ ಪ್ರೇಮ್‍ಚಂದ್ರ ಮಿಶ್ರಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News