×
Ad

ದೇಣಿಗೆ ದುರ್ಬಳಕೆ ಆರೋಪ: ಮೇಧಾ ಪಾಟ್ಕರ್ ವಿರುದ್ಧ ಪ್ರಕರಣ

Update: 2022-07-11 09:22 IST
photo: pti

ಹೊಸದಿಲ್ಲಿ: ಬುಡಕಟ್ಟು ಮಕ್ಕಳ ಶಿಕ್ಷಣದ ಹೆಸರಿನಲ್ಲಿ ಸಂಗ್ರಹಿಸಿದ 13 ಕೋಟಿ ರೂಪಾಯಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮತ್ತು ನರ್ಮದಾ ಬಚಾವೊ ಸಂಸ್ಥಾಪಕಿ ಮೇಧಾ ಪಾಟ್ಕರ್ ಹಾಗೂ ಇತರ 11 ಮಂದಿಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನರ್ಮದಾ ನವನಿರ್ಮಾಣ ಅಭಿಯಾನ ಟ್ರಸ್ಟ್ ಸಂಗ್ರಹಿಸಿದ ಮೊತ್ತವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ನೆರವು ನೀಡಲು ಬಳಸಲಾಗಿದೆ ಎಂದೂ ದೂರುದಾರರು ಆಪಾದಿಸಿದ್ದಾರೆ. ಮೇಧಾ ಪಾಟ್ಕರ್ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ದೂರುದಾರ, ಆರೆಸ್ಸೆಸ್‍ನ ವಿದ್ಯಾರ್ಥಿ ವಿಭಾಗದ ಸದಸ್ಯ ಎಂದು ಹೇಳಿದ್ದಾರೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಬರ್ವಾನಿ ಜಿಲ್ಲೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಮೇಧಾ ಪಾಟ್ಕರ್ ಅವರು ನರ್ಮದಾ ನವನಿರ್ಮಾಣ ಅಭಿಯಾನ ಟ್ರಸ್ಟ್‍ನ ಟ್ರಸ್ಟಿಯಾಗಿದ್ದಾರೆ.

ಪ್ರೀತಂರಾಜ್ ಬಾಂಡೋಲೆ ಎಂಬುವವರು ಮೇಧಾ ವಿರುದ್ಧ ದೂರು ನೀಡಿದ್ದು, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಬುಡಕಟ್ಟು ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ನೀಡುವುದಾಗಿ ಬಿಂಬಿಸಿಕೊಂಡು ಮೇಧಾ ಪಾಟ್ಕರ್, ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News