ʼಎಲ್ಲರೂ ನನ್ನಂತೆ ಸಿಂಗಲ್‌ ಆಗಿರಿʼ: ಜನಸಂಖ್ಯಾ ಹೆಚ್ಚಳಕ್ಕೆ ಪರಿಹಾರ ಸೂಚಿಸಿದ ನಾಗಾಲ್ಯಾಂಡ್ ಸಚಿವ

Update: 2022-07-11 13:16 GMT

 ಹೊಸದಿಲ್ಲಿ: ತಮ್ಮ `ಚಿಕ್ಕ ಕಣ್ಣುಗಳು' ಹೇಳಿಕೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೊಂಗ್ ಇದೀಗ ದೇಶದ ಏರುತ್ತಿರುವ ಜನಸಂಖ್ಯೆ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿ ಸುದ್ದಿಯಾಗಿದ್ದಾರೆ.

ವಿಶ್ವ ಜನಸಂಖ್ಯೆ ದಿನದ ಸಂದರ್ಭ ಪ್ರತಿಕ್ರಿಯಿಸಿದ ಸಚಿವರು ಕುಟುಂಬ ಯೋಜನೆ ಕುರಿತು ಯೋಚಿಸಿ ಆಯ್ಕೆ ಮಾಡಬೇಕು ಎಂದರಲ್ಲದೆ  ಒಂದು 'ಪರಿಹಾರ'ವನ್ನೂ ಸೂಚಿಸಿದ್ದಾರೆ.

"ವಿಶ್ವ ಜನಸಂಖ್ಯಾ ದಿನ'ದ ಸಂದರ್ಭ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಯೋಚಿಸೋಣ ಹಾಗೂ ಮಕ್ಕಳನ್ನು ಪಡೆಯುವ ಕುರಿತು ಯೋಚಿಸಿ ನಿರ್ಧರಿಸೋಣ. ಅಥವಾ ನನ್ನಂತೆ ಒಂಟಿ ಜೀವನ ನಡೆಸಿ ಹಾಗೂ ಜೊತೆಯಾಗಿ ನಾವು ಸುಸ್ಥಿರ ಭವಿಷ್ಯಕ್ಕಾಗಿ ಶ್ರಮಿಸಬಹುದು. ಬನ್ನಿ, ಸಿಂಗಲ್ಸ್ ಅಂದೋಲನಕ್ಕೆ ನನ್ನ ಜೊತೆಗೂಡಿ" ಎಂದು ಅವರು ಬರೆದಿದ್ದಾರೆ.

ಅವರ ಈ ಟ್ವೀಟ್ ಸ್ವಾರಸ್ಯಕರ ಪ್ರತಿಕ್ರಿಯೆಗೆ ಕಾರಣವಾಗಿದೆ. ಒಬ್ಬರು ಟ್ವೀಟ್ ಮಾಡಿ "ಸರ್ ನಿಮ್ಮ ಜನಪ್ರಿಯತೆ ಏರುತ್ತಿರುವ ರೀತಿ ನೋಡಿದರೆ ನೋವು ಬಹಳ ಕಾಲ ಒಂಟಿ ಜೀವನ ನಡೆಸಲಿಕ್ಕಿಲ್ಲ ಎಂದು ತೋರುತ್ತದೆ. ಸಲ್ಮಾನ್ ಖಾನ್ ನಂತರ ಅತ್ಯಂತ ಅರ್ಹ ಬ್ಯಾಚಲರ್" ಎಂದು ಟ್ವೀಟ್ ಮಾಡಿದ್ದಾರೆ.

ಈಶಾನ್ಯ ಭಾರತದ ಜನರ ಮುಖಚರ್ಯೆ ಕುರಿತ ಮಾತುಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಇಮ್ನಾ, ಚಿಕ್ಕ ಕಣ್ಣುಗಳ ಪ್ರಯೋಜನವನ್ನು ವಿವರಿಸಿ ಎಲ್ಲರಲ್ಲೂ ನಗೆ ಮೂಡಿಸಿದ್ದರು. ಕಣ್ಣಿಗೆ ಬೀಳುವ ಕಸ ಕಡಿಮೆ, ಮತ್ತೆ ದೀರ್ಘ ಕಾರ್ಯಕ್ರಮ ನಡೆಯುತ್ತಿರುವಾಗ ವೇದಿಕೆಯಲ್ಲಿ ಸುಲಭವಾಗಿ ನಿದ್ದೆಗೆ ಜಾರಬಹುದು" ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ, "ನನ್ನ ಸಹೋದರ ಫುಲ್ ಫಾರ್ಮ್‍ನಲ್ಲಿದ್ದಾರೆ" ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News