ಬಿಕ್ಕಟ್ಟಿನ ನಡುವೆ ಶ್ರೀಲಂಕಕ್ಕೆ ಭಾರತೀಯ ಸೇನೆ ರವಾನೆ ವರದಿಯ ಕುರಿತು ಹೈಕಮಿಷನ್‌ ಹೇಳಿದ್ದೇನು?

Update: 2022-07-11 15:20 GMT

 ಕೊಲಂಬೊ, ಜು.11: ಶ್ರೀಲಂಕಾಕ್ಕೆ ಸೇನೆಯನ್ನು ರವಾನಿಸುವ ವರದಿಯನ್ನು ಭಾರತ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ , ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ ಮನವಿ ಮಾಡಿಕೊಂಡರೆ ಭಾರತ ಶ್ರೀಲಂಕಾಕ್ಕೆ ಸೇನೆಯನ್ನು ರವಾನಿಸಬೇಕು ಎಂದಿದ್ದರು.

ಭಾರತವು ಶ್ರೀಲಂಕಾದ ಜನತೆಯೊಂದಿಗೆ ನಿಲ್ಲಲಿದೆ ಎಂದು ಕೊಲಂಬೋದಲ್ಲಿ ಭಾರತದ ಹೈಕಮಿಷನರ್ ಹೇಳಿದ್ದಾರೆ. ಶ್ರೀಲಂಕಾಕ್ಕೆ ಭಾರತವು ತನ್ನ ಸೇನೆಯನ್ನು ರವಾನಿಸಲಿದೆ ಎಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಊಹಾತ್ಮಕ ವರದಿಯನ್ನು ಭಾರತ ಸ್ಪಷ್ಟವಾಗಿ ನಿರಾಕರಿಸುತ್ತದೆ. ಈ ವರದಿ ಮತ್ತು ಇಂತಹ ಅಭಿಪ್ರಾಯಗಳು ಭಾರತ ಸರಕಾರದ ನಿಲುವಿಗೆ ಅನುಗುಣವಾಗಿಲ್ಲ.

ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಯ ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರೊಂದಿಗೆ ಭಾರತ ನಿಂತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಹೈಕಮಿಷನ್ ಹೇಳಿದೆ.

ಗೊತಬಯ ಮತ್ತು ಮಹಿಂದಾ ರಾಜಪಕ್ಸ ಇಬ್ಬರೂ ಮುಕ್ತವಾಗಿ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆದ್ದು ಬಂದವರು. ಹೀಗಿರುವಾಗ ಇಂತಹ ನ್ಯಾಯಸಮ್ಮತ ಆಯ್ಕೆಯನ್ನು ಜನಸಮೂಹ ರದ್ದುಗೊಳಿಸಲು ಭಾರತ ಹೇಗೆ ಅವಕಾಶ ನೀಡುತ್ತದೆ ? ಹೀಗಾದರೆ ನಮ್ಮ ನೆರೆಯ ಯಾವುದೇ ಪ್ರಜಾಸತ್ತಾತ್ಮಕ ದೇಶವೂ ಸುರಕ್ಷಿತವಾಗಿರದು. ರಾಜಪಕ್ಸ ಭಾರತದ ನೆರವು ಕೋರಿದರೆ ಭಾರತ ನೀಡಬೇಕು ಎಂದು ಸ್ವಾಮಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News