ಜನಸಂಖ್ಯೆ ಏರಿಕೆ ಅಪಾಯವಾಗಿದ್ದರೆ ಚೀನಾ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ?: ತೇಜಸ್ವಿ ಯಾದವ್‌ ಪ್ರಶ್ನೆ

Update: 2022-07-11 15:04 GMT

ಪಾಟ್ನಾ: ಏರುತ್ತಿರುವ ಜನಸಂಖ್ಯೆಯು ಅಂತಹ ದೊಡ್ಡ ಅಪಾಯವಾಗಿದ್ದರೆ, ಚೀನಾದಂತಹ ದೇಶವು ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಸೋಮವಾರ ಪ್ರಶ್ನಿಸಿದ್ದಾರೆ. ಹಣದುಬ್ಬರ, ನಿರುದ್ಯೋಗ ಮತ್ತು ಅನಕ್ಷರತೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಒತ್ತಾಯಿಸುತ್ತಿರುವ ಕೆಲವು ಬಿಜೆಪಿ ನಾಯಕರ ವಿರುದ್ಧ ಪರೋಕ್ಷ  ತಿರುಗೇಟು ನೀಡಿದ ತೇಜಸ್ವಿ ಯಾದವ್, “ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ, ಆರ್ಥಿಕತೆ, ಜಿಡಿಪಿ ಮತ್ತು ಅಭಿವೃದ್ಧಿಯಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ. ಇದು ಚರ್ಚೆಯನ್ನು ಹುಟ್ಟುಹಾಕುತ್ತದೆಯೇ? ಏರುತ್ತಿರುವ ಜನಸಂಖ್ಯೆಯು ಬೆದರಿಕೆಯಾಗಿದ್ದರೆ, ಚೀನಾ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್‌ಜೆಡಿ ನಾಯಕ, ʼಹಣದುಬ್ಬರ, ಅನಕ್ಷರತೆ ಮತ್ತು ನಿರುದ್ಯೋಗವನ್ನು ನಿಯಂತ್ರಿಸಲು ಸರ್ಕಾರವು ಗಮನಹರಿಸುತ್ತಿಲ್ಲ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ಈಗಲೇ ಎಚ್ಚೆತ್ತುಕೊಳ್ಳಬೇಕುʼ ಎಂದು ಆಗ್ರಹಿಸಿದ್ದಾರೆ. ಇಂತಹ ನೈಜ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

ನಿರುದ್ಯೋಗದಿಂದ ಅರಾಜಕತೆ ಉಂಟಾಗುತ್ತದೆ ಎಂದು ಯಾದವ್ ಹೇಳಿದ್ದಾರೆ. ಇತ್ತೀಚಿನ ಅಗ್ನಿಪಥ್ ಯೋಜನೆ ವಿರೋಧೀ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಯಾದವ್‌, ನಿರುದ್ಯೋಗದ ಭಯವು ಯುವಕರಲ್ಲಿ ಆಕ್ರೋಶವನ್ನು ಹುಟ್ಟು ಹಾಕುತ್ತಿದೆ, ಅದು ಅರಾಜಕತೆಗೆ ಕಾರಣವಾಗುತ್ತದೆ. ನಾವು ಇತ್ತೀಚೆಗೆ ಅಗ್ನಿಪಥ್ ಯೋಜನೆಯೊಂದಿಗೆ ನೋಡಿದಂತೆ, ನಿರುದ್ಯೋಗದ ಭಯವು ಯುವಕರಲ್ಲಿ ಕೋಪವನ್ನು ಉಂಟುಮಾಡಿತು. ಆ ಸಿಟ್ಟು ಹೇಗೆ ಅರಾಜಕತೆಗೆ ತಿರುಗಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News