×
Ad

ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಪತ್ತೆಯಾದ ಕೋಟ್ಯಾಂತರ ರೂಪಾಯಿ ಪೊಲೀಸರಿಗೆ ಹಸ್ತಾಂತರ

Update: 2022-07-11 21:11 IST

ಕೊಲಂಬೊ, ಜು.11: ತಮ್ಮ ಸರಕಾರಿ ನಿವಾಸದಿಂದ ಪಲಾಯನ ಮಾಡುವ ಸಂದರ್ಭ ಅಧ್ಯಕ್ಷ ಗೊತಬಯ ರಾಜಪಕ್ಸ ಬಿಟ್ಟುಹೋಗಿರುವ ಕೋಟ್ಯಾಂತರ ರೂಪಾಯಿ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ಅದನ್ನು ನ್ಯಾಯಾಲಯಕ್ಕೆ ಜಮೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ಶನಿವಾರ ಕೊಲಂಬೊದಲ್ಲಿರುವ ಅಧ್ಯಕ್ಷರ ಸರಕಾರಿ ನಿವಾಸಕ್ಕೆ ನುಗ್ಗಿದ್ದರು. ಪ್ರತಿಭಟನೆ ನಿಯಂತ್ರಣ ಮೀರುವ ಮುನ್ಸೂಚನೆ ಪಡೆದಿದ್ದ ಅಧ್ಯಕ್ಷ ಗೊತಬಯ ರಾಜಪಕ್ಸ ಶುಕ್ರವಾರ ರಾತ್ರಿಯೇ ನಿವಾಸದಿಂದ ಪಲಾಯನ ಮಾಡಿದ್ದರು. ಅವರ ನಿವಾಸದಲ್ಲಿ ಪತ್ತೆಯಾದ 17.85 ಮಿಲಿಯನ್ ರೂಪಾಯಿ ಹಣವನ್ನು ಪ್ರತಿಭಟನಾಕಾರರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿವಾಸದಲ್ಲಿ ದಾಖಲೆ ಪತ್ರಗಳಿದ್ದ ಒಂದು ಸೂಟ್ಕೇಸ್ ಅನ್ನೂ ಬಿಟ್ಟುಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಪಕ್ಸ ಎಲ್ಲಿದ್ದಾರೆ ಎಂಬುದು ಸೋಮವಾರ ಬೆಳಗ್ಗಿನವರೆಗೂ ಸ್ಪಷ್ಟವಾಗಿಲ್ಲ. ಆದರೆ ರಾಜೀನಾಮೆ ನೀಡುವ ಇಚ್ಛೆಯನ್ನು ಅವರು ತನ್ನ ಬಳಿ ಅಧಿಕೃತವಾಗಿ ವ್ಯಕ್ತಪಡಿಸಿರುವುದಾಗಿ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ರಾಜಪಕ್ಸ ರಾಜೀನಾಮೆ ನೀಡಿದರೆ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ.ಆದರೆ ಒಮ್ಮತದ ಸರಕಾರ ರಚನೆಗೆ ಸಹಮತ ಮೂಡಿದರೆ ತಾನು ಪದತ್ಯಾಗಕ್ಕೆ ಸಿದ್ಧ ಎಂದು ವಿಕ್ರಮಸಿಂಘೆ ಈಗಾಗಲೇ ಘೋಷಿಸಿದ್ದಾರೆ. ಜುಲೈ 13ರಂದು ರಾಜೀನಾಮೆ ನೀಡುವುದಾಗಿ ರಾಜಪಕ್ಸ ಈಗಾಗಲೇ ಸಂಸತ್ ಸ್ಪೀಕರ್ ಮಹಿಂದಾ ಅಬೆವರ್ಧನಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಪ್ರಧಾನಿಯ ಸರಕಾರಿ ನಿವಾಸದಲ್ಲಿ ಸೋಮವಾರವೂ ಉಳಿದುಕೊಂಡಿರುವ ಸಾವಿರಾರು ಪ್ರತಿಭಟನಾಕಾರರು, ರಾಜಪಕ್ಸ ರಾಜೀನಾಮೆ ನೀಡುವವರೆಗೆ ತೆರಳುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಅಣಕು ಸಂಪುಟ ಸಭೆ ನಡೆಸಿದ ಪ್ರತಿಭಟನಾಕಾರರು

ಶ್ರೀಲಂಕಾ ಅಧ್ಯಕ್ಷರ ಸರಕಾರಿ ನಿವಾಸವನ್ನು ಆಕ್ರಮಿಸಿಕೊಂಡಿರುವ ಸರಕಾರ ವಿರೋಧಿ ಪ್ರತಿಭಟನಾಕಾರರು ರವಿವಾರ ಅಣಕು ಸಚಿವ ಸಂಪುಟ ಸಭೆ ನಡೆಸಿದರು ಮತ್ತು ಗೊತಬಯ ನೇತೃತ್ವದ ಸರಕಾರವನ್ನು ಅಪಹಾಸ್ಯ ಮಾಡಲು ‘ಐಎಂಎಫ್ ಜತೆ ಸಭೆ ನಡೆಸಿದರು’ ಎಂದು ವರದಿಯಾಗಿದೆ.

ಅಣಕು ಸಂಪುಟ ಸಭೆಯಲ್ಲಿ ಪ್ರಧಾನಿ ರಣಿಲ್ ವಿಕ್ರಮಸಿಂಘೆಯ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ಘಟನೆಯ ಬಗ್ಗೆ ಚರ್ಚಿಸಿದರು. ಬಳಿಕ ಐಎಂಎಫ್ ಜತೆಗಿನ ಅಣಕು ಸಭೆ ನಡೆಸಲಾಗಿದ್ದು ಇದರಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಓರ್ವ ವಿದೇಶೀ ವ್ಯಕ್ತಿಯೂ ಪಾಲ್ಗೊಂಡಿದ್ದ ಎಂದು ವರದಿ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News