ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಕಾರು: ಸಹಸವಾರ ಮೃತ್ಯು
Update: 2022-07-11 21:23 IST
ಉಡುಪಿ : ಕಾರೊಂದು ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಸಹಸವಾರ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಜು.10ರಂದು ಮಧ್ಯಾಹ್ನ ವೇಳೆ ಉಡುಪಿ ಕರಾವಳಿ ಶಾರದ ಹೋಟೆಲ್‌ನ ಮುಂಭಾಗ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ.
ಮೃತರನ್ನು ಬಾಗಲಕೋಟೆ ಮೂಲದ ಸುನೀಲ್ ಕುಮಾರ್(೨೪) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬೈಕ್ ಸವಾರ ಮಂಜುನಾಥ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಕಾರು ಚಾಲಕ ಅಂಕಿತ್ ಶೆಟ್ಟಿ ಹಾಗೂ ಕಾರಿನಲ್ಲಿದ್ದ ಮಹಿಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಹ್ಮಾವರದ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು, ರಸ್ತೆಯ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಕರಾವಳಿ ಕಡೆಯಿಂದ ನಿಟ್ಟೂರು ಜಂಕ್ಷನ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಸವಾರ ಸುನೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.