×
Ad

ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ 12 ಶಿವಸೇನೆ ಸಂಸದರ ಬೆಂಬಲ: ವರದಿ

Update: 2022-07-12 07:43 IST
ದ್ರೌಪದಿ ಮುರ್ಮು

ಮುಂಬೈ: ಶಿವಸೇನೆಯ 19 ಸಂಸದರ ಪೈಕಿ 12 ಮಂದಿ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಈ ತಿಂಗಳ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಸದರ ನಿಲುವನ್ನು ಆಲಿಸಲು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ ಮುರ್ಮು ಅವರನ್ನು ಬೆಂಬಲಿಸುವಂತೆ ಸಂಸದರು ಒತ್ತಾಯಿಸಿದರು. ದಕ್ಷಿಣ-ಕೇಂದ್ರ ಮುಂಬೈ ಸಂಸದ ರಾಹುಲ್ ಶೇವಾಲೆ ಕಳೆದ ವಾರ ದ್ರೌಪದಿಯವರನ್ನು ಬೆಂಬಲಿಸುವಂತೆ ಬಹಿರಂಗ ಕರೆ ನೀಡಿದ್ದರು.

ಏಕನಾಥ ಶಿಂಧೆ ಬಣವನ್ನು ಸೇರಿದ ಇಬ್ಬರು ಸಂಸದರಾದ ಭಾವನಾ ಗಾವ್ಳಿ ಮತ್ತು ಮುಖ್ಯಮಂತ್ರಿ ಶಿಂಧೆಯವರ ಪುತ್ರ ಶ್ರೀಕಾಂತ್ ಶಿಂಧೆ ಅವರನ್ನು ಹೊರತುಪಡಿಸಿ ಉಳಿದೆಲ್ಲ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಾಯುವ್ಯ ಮುಂಬೈ ಸಂಸದ ಗಣರಾಜ ಕೀರ್ತಿಕರ್ ಹೇಳಿದ್ದಾರೆ.

ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಎಲ್ಲ ಸಂಸದರು ಉದ್ಧವ್ ಠಾಕ್ರೆ ಜತೆಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಿವಸೇನೆ ಮುರ್ಮು ಅವರನ್ನು ಬೆಂಬಲಿಸಿದರೆ, ಶಿಂಧೆ ಬಣದ ಜತೆ ಮತ್ತು ಬಿಜೆಪಿ ಜತೆ ರಾಜಿ ಸಂಧಾನದ ಬಾಗಿಲು ತೆರೆಯಲಿದೆ ಎಂದು ಸಂಸದರು ಮಾಜಿ ಸಿಎಂ ಠಾಕ್ರೆ ಅವರಿಗೆ ಸಲಹೆ ಮಾಡಿದರು ಎಂದು ತಿಳಿದು ಬಂದಿದೆ.

ಎಲ್ಲ ಸಂಸದರೂ ಠಾಕ್ರೆಯವರ ಜತೆಗಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ, ಶಿವಸೇನೆಯ ಅವಕಾಶಗಳು ಕಡಿಮೆಯಾಗುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ. ಆದರೆ ಸಭೆಯಲ್ಲಿ ಠಾಕ್ರೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿವಸೇನಾ ಸಂಸದರೊಬ್ಬರು ಹೇಳಿದ್ದಾರೆ.

ಶಿವಸೇನೆ ಲೋಕಸಭೆಯಲ್ಲಿ ಮಹಾರಾಷ್ಟ್ರದಿಂದ 18 ಮಂದಿ ಹಾಗೂ ದಾದ್ರಾ ಮತ್ತು ನಗರ ಹವೇಲಿಯಿಂದ ಒಬ್ಬರು ಹೀಗೆ 19 ಸದಸ್ಯರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News