×
Ad

ಬಿಜೆಪಿಗೆ ಪಕ್ಷಾಂತರ ಇಲ್ಲ: ಗೋವಾ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೊ

Update: 2022-07-12 08:22 IST
ಶಾಸಕ ಮೈಕೆಲ್ ಲೋಬೊ (ಫೋಟೊ - Twitter))

ಪಣಜಿ: ಬಿಜೆಪಿ ಸಹಕಾರದಲ್ಲಿ ಮಾಜಿ ಸಿಎಂ ದಿಗಂಬರ ಕಾಮತ್ ನೇತೃತ್ವದಲ್ಲಿ ಪಕ್ಷದ ಬಂಡಾಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಗೋವಾ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಮೈಕೆಲ್ ಲೋಬೊ ಅವರನ್ನು ಕಾಂಗ್ರೆಸ್ ವಜಾ ಮಾಡಿದ ಬೆನ್ನಲ್ಲೇ, ಸೋಮವಾರ ಹೇಳಿಕೆ ನೀಡಿರುವ ಲೋಬೊ ತಾವು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ವಜಾಗೊಳಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಎಲ್ಲ ಶಾಸಕರು ದಕ್ಷಿಣ ಗೋವಾದಲ್ಲಿ ಜತೆಯಾಗಿ ಇದ್ದು, ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುವ ಇಚ್ಛೆ ಇಲ್ಲ ಎಂಬ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡಿದ್ದಾಗಿ ಅವರು ಹೇಳಿದ್ದಾರೆ.

"ಸಮಸ್ಯೆ ಏನು ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲ ಕಾಂಗ್ರೆಸ್ ಶಾಸಕರು ಜತೆಯಾಗಿದ್ದೇವೆ. ನಾವು ದಕ್ಷಿಣ ಗೋವಾಗೆ ತೆರಳಿದ್ದೇವೆ. ಮತ್ತೊಮ್ಮೆ ಅವರು ಪತ್ರಿಕಾಗೋಷ್ಠಿ ನಡೆಸಲು ಬಯಸಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುವ ಇಚ್ಛೆ ಇಲ್ಲ ಎಂದು ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದೇನೆ" ಎಂದು ವಿವರಿಸಿದ್ದಾರೆ.

"ನಾವು ಕಾಂಗ್ರೆಸ್ ಪಕ್ಷದ ಟಿಕೆಟ್‍ನಲ್ಲಿ ಗೆದ್ದಿದ್ದೇವೆ. ನಾವು ಕಾಂಗ್ರೆಸ್ ಪಕ್ಷದ ಜತೆಗೇ ಇದ್ದೇವೆ. ಆದ್ದರಿಂದ ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಹೇಳಿದರು.

ಈ ಮಧ್ಯೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಅವರು, "ಮೈಕೆಲ್ ಲೋಬೊ ಅವರನ್ನು ಸಿಎಲ್‍ಪಿ ನಾಯಕ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಶಾಸಕಾಂಗ ಪಕ್ಷದ ನಿರ್ಧಾರವನ್ನು ಸ್ಪೀಕರ್‍ಗೆ ಈಗಾಗಲೇ ಪತ್ರದ ಮೂಲಕ ತಿಳಿಸಲಾಗಿದೆ. ಹೊಸ ನಾಯಕನನ್ನು ಆಯ್ಕೆ ಮಾಡಿ ಅದನ್ನು ಸ್ಪೀಕರ್‍ಗೆ ಸಲ್ಲಿಸಲಾಗುವುದು. ನಾವು ಆರು ಮಂದಿ ಶಾಸಕರಿದ್ದು, ಮತ್ತೊಬ್ಬರನ್ನು ನಿರೀಕ್ಷಿಸುತ್ತಿದ್ದೇವೆ. ಒಟ್ಟು ಏಳು ಮಂದಿ ಇದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರು ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು, "ಸಿಎಂ ಆಗಿರುವ ಕಾರಣದಿಂದ ಹಲವು ಮಂದಿ ನನ್ನ ಭೇಟಿಗೆ ಬರುತ್ತಾರೆ. ನಾಳೆ ವಿಧಾನಸಭೆ ಅಧಿವೇಶನ ಇದೆ. ಈ ಸಂಬಂಧ ಜನ ನನ್ನನ್ನು ಭೇಟಿ ಮಾಡಲು ಬರುತ್ತಾರೆ. ವಿಧಾನಸಭೆ ಕಾರ್ಯಗಳಿಗೆ ಸಂಬಂಧಿಸಿದಂತೆ ನಾನು ಬ್ಯುಸಿ ಇದ್ದೇನೆ. ಇತರ ಪಕ್ಷಗಳ ಬಗ್ಗೆ ನಾನೇಕೆ ಅಭಿಪ್ರಾಯ ವ್ಯಕ್ತಪಡಿಸಬೇಕು" ಎಂದು ಹೇಳಿರುವುದಾಗಿ indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News